ಚೀನಾದ ಹುನಾನ್‌ನಲ್ಲಿ 6 ಅಂತಸ್ಥಿನ ಕಟ್ಟಡ ಕುಸಿತ
ಬೀಜಿಂಗ್: ಏಪ್ರಿಲ್ 30: ಚೀನಾದ ಹುನಾನ್ ಪ್ರಾಂತ್ಯದ ಚಾಂಗ್‌ಶಾ ನಗರದಲ್ಲಿ ಆರು ಅಂತಸ್ತಿನ ಕಟ್ಟಡವೊಂದರ ಅವಶೇಷಗಳಡಿಯಲ್ಲಿ 23 ಮಂದಿ ಸಿಲುಕಿಕೊಂಡಿದ್ದು, ಕನಿಷ್ಠ 39 ಮಂದಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚೀನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ಶನಿವಾರ ಈ ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯಕರ್ತರು ಈಗಾಗಲೇ ಅವಶೇಷಗಳಡಿಯಿಂದ ಐದು ಜನರನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಸಿಟಿವಿ ತಿಳಿಸಿದೆ. ಅವಶೇಷಗಳಡಿಯಿಂದ ರಕ್ಷಿಸಿದ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸದ್ಯ ಕಟ್ಟಡ ಕುಸಿತಕ್ಕೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸ್ಥಳದಲ್ಲಿ ಇನ್ನೂ ನಡೆಯುತ್ತಿವೆ. ಚಂಗ್ ಶಾ ನಗರದಲ್ಲಿನ ಈ ಘಟನೆ ನಡೆದ ಕಟ್ಟಡದ ಒಟ್ಟು ಪ್ರದೇಶವು ಸರಿಸುಮಾರು 800 ಚದರ ಮೀಟರ್ (8,610 ಚದರ ಅಡಿ) ಆಗಿದೆ. ಕಟ್ಟಡವು ಅಂಗಡಿ, ಅಡುಗೆ ಸೇವೆ, ಖಾಸಗಿ ಚಿತ್ರಮಂದಿರ ಮತ್ತು ಸಣ್ಣ ಹೋಟೆಲ್ ಅನ್ನು ಒಳಗೊಂಡಿತ್ತು ಎಂದು ಸಿಸಿಟಿವಿ ವರದಿ ಮಾಡಿದೆ.