ಅಂತರರಾಷ್ಟ್ರೀಯ

ನೇಪಾಳ ಪ್ರವಾಹ: 6 ಮಂದಿ ಸಾವು, 11 ಜನ ನಾಪತ್ತೆ

ನೇಪಾಳ ಪ್ರವಾಹ: 6 ಮಂದಿ ಸಾವು, 11 ಜನ ನಾಪತ್ತೆ

ಕಠ್ಮಂಡು, ಆಗುಸ್ಟ್19: (ಕ್ಸಿನ್ಹುವಾ) ನೇಪಾಳದ ಪಶ್ಚಿಮ ಅಚಮ್ ಜಿಲ್ಲೆಯ ರಾಮರೋಷನ್ ಗ್ರಾಮದಲ್ಲಿ ಸಂಭವಿಸಿದ್ದ ಪ್ರವಾಹದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಕಾಣೆಯಾಗಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. "ಸ್ಥಳೀಯ ಕೈಲಾಶ್ ಹೊಳೆಯಲ್ಲಿ ರಾತ್ರಿಯ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗ್ರಾಮೀಣ ಪುರಸಭೆಯ ಸೈನಿಬಜಾರ್ ಪ್ರದೇಶದಲ್ಲಿ 22 ಮನೆಗಳು ಮುಳುಗಿದ್ದರಿಂದ ಮೂವರು ಪುರುಷರು ಮತ್ತು ಮೂವರು ಮಹಿಳೆಯರ ಶವ ಪತ್ತೆಯಾಗಿದೆ. ಆದರೆ 11 ಜನರು ಇನ್ನೂ ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ದತ್ತಾ ಅವಸ್ಥಿ, ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಹೊಳೆಯಿಂದ ಕೊಚ್ಚಿ ಹೋದವರಲ್ಲಿ ಹೆಚ್ಚಿನವರು ಈ ಪ್ರದೇಶದಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದ ಜನರ ಕುಟುಂಬ ಸದಸ್ಯರು. "ಮಂಗಳವಾರ ಮಧ್ಯರಾತ್ರಿಯಲ್ಲಿ ನಿದ್ದೆ ಮಾಡುತ್ತಿದ್ದರಿಂದ ಅನೇಕ ಜನರು ಪ್ರವಾಹದಿಂದ ಪಾರಾಗಲು ಸಾಧ್ಯವಾಗಿಲ್ಲ" ಎಂದು ನೇಪಾಳದ ಸ್ಥಳೀಯ ಸರ್ಕಾರಗಳಲ್ಲಿ ಒಂದಾದ ಗ್ರಾಮೀಣ ಪುರಸಭೆಯ ಅಧ್ಯಕ್ಷ ಜಂಕರ್ ಬಹದ್ದೂರ್ ಸೌದ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಆದರೆ, ಕಳೆದ 37 ವರ್ಷಗಳಲ್ಲಿ ಈ ಪ್ರದೇಶದಲ್ಲಿ ಇಂತಹ ಬೃಹತ್ ಪ್ರವಾಹವನ್ನು ನೋಡಿದ್ದು ಇದೇ ಮೊದಲು ಎಂದು ಪೊಲೀಸರು ಸ್ಥಳೀಯರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಪ್ರವಾಹವು ಪ್ರಾಣಹಾನಿ ಮಾತ್ರವಲ್ಲದೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳನ್ನು ಸಹ ನಾಶಪಡಿಸಿದೆ. ಸ್ಥಳೀಯ ಕೃಷಿ ಜಮೀನುಗಳು, ರಸ್ತೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸುದ್ದಿ ಓದಿ