ಅಂತರರಾಷ್ಟ್ರೀಯ

ಓರ್ವ ವ್ಯಕ್ತಿ ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 5 ಸಾವಿರ ಮಂದಿ ಕ್ವಾರಂಟೈನ್

ಓರ್ವ ವ್ಯಕ್ತಿ ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ 5 ಸಾವಿರ ಮಂದಿ ಕ್ವಾರಂಟೈನ್

ಬೀಜಿಂಗ್: ಮೇ 30 : ಚೀನಾದಲ್ಲಿ ಕೋವಿಡ್ ಕಟ್ಟಿಹಾಕಲು ಸರ್ಕಾರ ಹಲವು ಕಠಿಣ ಕ್ರಮಗಳನ್ನ ಕೈಗೊಂಡಿದೆ. ಸೋಂಕಿತ ಪ್ರದೇಶಗಳಲ್ಲಿ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಆದ್ರೆ ನಿವಾಸಿಗಳು ಸರ್ಕಾರದ ಸೂಚನೆಗಳನ್ನ ಪಾಲಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ವರದಿಯಾಗ್ತಿದೆ.  ಬೀಜಿಂಗ್ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಇರಲು ನೀಡಿದ ಆದೇಶವನ್ನು ನಿರ್ಲಕ್ಷಿಸಿದ್ದು, ಇದರಿಂದಾಗಿ ಆತನ ಸಾವಿರಾರು ನೆರೆಹೊರೆಯವರು ಕ್ವಾರಂಟೈನ್ ಸೆಂಟರ್ ಸೇರುವಂತಾಗಿದೆ.

ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಕಳೆದ ಐದು ವಾರಗಳಲ್ಲಿ ಲಕ್ಷಾಂತರ ನಿವಾಸಿಗಳಿಗೆ ಮನೆಯಲ್ಲೇ ಇರಲು ಆದೇಶಿಸಲಾಗಿತ್ತು. ಆದರೆ ಸನ್ ಎಂಬ ಉಪನಾಮದ 40  ವರ್ಷದ ವ್ಯಕ್ತಿಯೊಬ್ಬ ಶಾಪಿಂಗ್ ಸೆಂಟರ್‌ಗೆ ಭೇಟಿ ನೀಡಿದ್ದರು. ಅವರಿಗೆ ಕ್ವಾರಂಟೈನ್ ಆಗಲು ತಿಳಿಸಿದ್ದ ನಿಯಮವನ್ನ ಅನುಸರಿಸಲು ವಿಫಲರಾಗಿದ್ದು, ಹಲವು ಬಾರಿ ಮನೆಯಿಂದ ಹೊರಗೆ ಹೋಗಿದ್ದರು.

ಕೋವಿಡ್ ಪರೀಕ್ಷೆಯಲ್ಲಿ ಸನ್ ಮತ್ತು ಅವರ ಪತ್ನಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.  ಇದರಿಂದಾಗಿ ಅವರ ನೆರೆಹೊರೆಯವರಲ್ಲಿ 5,000 ಜನರನ್ನು ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಿದ್ದು,  250 ಜನರನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸನ್ ಗೆ ದಂಡ ವಿಧಿಸಿದ್ದು ಈಗ ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ.

ಸೋಮವಾರ ಬೀಜಿಂಗ್‌ನಲ್ಲಿ ಕೋವಿಡ್  ನಿರ್ಬಂಧಗಳನ್ನು ಸಡಿಲಿಸಿದ ನಂತರ ಇಂತಹ ಘಟನೆ ವರದಿಯಾಗಿದೆ.  ಕೊರೊನಾ ನಿಯಂತ್ರಣದಲ್ಲಿರೋದರಿಂದ ಉದ್ಯಾನವನಗಳು, ವಸ್ತುಸಂಗ್ರಹಾಲಯಗಳು ಮತ್ತು ಚಿತ್ರಮಂದಿರಗಳನ್ನು ಪುನಃ ತೆರೆಯಲಾಗಿದೆ.  ಬೇಜಿಂಗ್ ನಲ್ಲಿ ಕಳೆದ ವಾರದಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ.

ರಾಜಧಾನಿಯ ಹೆಚ್ಚು ಜನಸಂಖ್ಯೆ ಹೊಂದಿರುವ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಬಸ್, ಸುರಂಗಮಾರ್ಗ ಮತ್ತು ಟ್ಯಾಕ್ಸಿ ಸೇವೆಗಳು ಸೋಮವಾರದಿಂದ ಮತ್ತೆ ಪ್ರಾರಂಭವಾಗಿವೆ.  ಮತ್ತು ಲಕ್ಷಾಂತರ ಜನರಿಗೆ ಕೆಲಸಕ್ಕೆ ಮರಳಲು ತಿಳಿಸಲಾಗಿದೆ.

ಚೀನಾದ ವಾಣಿಜ್ಯ ಕೇಂದ್ರ ಶಾಂಘೈ ಜೂನ್ 1 ರಿಂದ ವ್ಯವಹಾರಗಳನ್ನು ಮರು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ. ಲಾಕ್‌ಡೌನ್‌ನಿಂದ ಸ್ಥಗಿತಗೊಂಡ ಎಲ್ಲಾ ಆರ್ಥಿಕ ಚಟುವಟಿಕೆಗಳು ಸುಮಾರು ಎರಡು ತಿಂಗಳ ನಂತರ ನಗರದಾದ್ಯಂತ ಆರಂಭವಾಗಲಿವೆ.

ಸುದ್ದಿ ಓದಿ