ಪಾಕಿಸ್ತಾನದಲ್ಲಿ 5.7 ತೀವ್ರತೆಯ ಭೂಕಂಪ.. ಕನಿಷ್ಟ 20 ಮಂದಿ ಸಾವು
ಇಸ್ಲಾಮಾಬಾದ್, ಅ 7: ದಕ್ಷಿಣ ಪಾಕಿಸ್ತಾನದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ 5.7 ತೀವ್ರತೆಯ ಭೂಕಂಪದಲ್ಲಿ ಸುಮಾರು 20 ಜನರು ಸಾವನ್ನಪ್ಪಿದ್ದಾರೆ. ಮನೆಯ ಛಾವಣಿಗಳು, ಗೋಡೆಗಳು ಕುಸಿದು ಹೆಚ್ಚಿನವರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಬ್ಬ ಮಹಿಳೆ ಹಾಗೂ ಆರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ.
ಭೂಕಂಪದಿಂದಾಗಿ 20 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ಎಂದು ಪ್ರಾಂತೀಯ ಒಳಾಡಳಿತ ಸಚಿವ ಮೀರ್ ಜಿಯಾ ಉಲ್ಲಾ ಲಾಂಗು ಹೇಳಿದ್ದು, "ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಬಲೂಚಿಸ್ತಾನದ ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ನಸೀರ್ ನಾಸರ್, ಪ್ರತಿಕ್ರಿಯಿಸಿ 15 ರಿಂದ 20 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.
ಬಲೂಚಿಸ್ತಾನದ ಗುಡ್ಡಗಳ ಹರ್ನೈ ನಗರ ತೀವ್ರ ಬಾಧಿತಗೊಂಡಿದ್ದು, ರಸ್ತೆ, ವಿದ್ಯುತ್ ಹಾಗೂ ದೂರಸಂಪರ್ಕ ವ್ಯಾಪ್ತಿಯ ಕೊರತೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಬಲೂಚಿಸ್ತಾನದ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಲ್ಲಿಯೂ ಭೂಕಂಪದ ಅನುಭವವಾಗಿದೆ.