46ನೇ ನಾಡಹಬ್ಬ ಉತ್ಸವ: ಅಕ್ಟೋಬರ್ 11 ರಿಂದ 21 ರವರೆಗೆ ಸಕಲ ಸಿದ್ಧತೆ
ಸವದತ್ತಿ 05 : ಮೈಸೂರು ನಾಡಹಬ್ಬದ ನಂತರ ರಾಜ್ಯದಲ್ಲೇ ಎರಡನೆಯದಾಗಿ ಕಳೆಗಟ್ಟುವ, ಸವದತ್ತಿಯ ಐತಿಹಾಸಿಕ ನಾಡಹಬ್ಬ ನವರಾತ್ರಿ ಉತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ತಿಳಿಸಿದೆ. ನಗರದ ಗಾಂಧಿ ಚೌಕದಲ್ಲಿರುವ ಬಾಬಣ್ಣ ಹಂಪಣ್ಣವರ ಗೃಹ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಬಸವರಾಜ ಪುರದಗುಡಿ ಅವರು ಹಬ್ಬದ ರೂಪುರೇಷೆಗಳ ಕುರಿತು ಮಾಹಿತಿ ನೀಡಿ, ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರುಗಲಿದೆ ಎಂದು ತಿಳಿಸಿದರು.
ಉತ್ಸವದ ಅಂಗವಾಗಿ ಸ್ಥಳೀಯ ಹಾಗೂ ಹೊರರಾಜ್ಯಗಳ ಖ್ಯಾತ ಕಲಾತಂಡಗಳಿಂದ ಹಾಗೂ ಸನ್ಮಾನಿತರನ್ನು, ಜಾನಪದ, ನೃತ್ಯ, ಸಂಗೀತ ಮತ್ತು ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸುನೀಲ್ ಸುಳ್ಳದ ಮಾತನಾಡಿ ಗಾಂಧಿ ಚೌಕದಲ್ಲಿ ನಾಡಹಬ್ಬದ ತಾಯಿ ಭುವನೇಶ್ವರಿ ಪ್ರತಿಷ್ಠಾಪಿಸಿ, ಅದ್ದೂರಿಯಾಗಿ ಭವ್ಯ ಮೆರವಣಿಗೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ನಾಡಹಬ್ಬವು ನಮ್ಮೆಲ್ಲರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಊರಿನ ಸಮಸ್ತ ಹಿರಿಯರು, ಯುವಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯು ಈ ಮೂಲಕ ವಿನಂತಿಸಿಕೊಂಡಿದೆ.ಈ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಬಸವರಾಜ ಹಂಪಣ್ಣವರ, ಬಸವರಾಜ ಅತ್ತಿಗೇರಿ, ಪ್ರಕಾಶ ಬಾಳೋಜಿ, ಶಂಕರ್ ಗುಡಿ, ಮುಂತಾದವರು ಉಪಸ್ಥಿತರಿದ್ದರು.