ಅಫ್ಘಾನಿಸ್ತಾನಕ್ಕೆ ರಷ್ಯಾದಿಂದ 36 ಟನ್ ಮಾನವೀಯ ನೆರವು
ಕಾಬೂಲ್, ನ.19: ಅಫ್ಘಾನಿಸ್ತಾನಕ್ಕೆ ರಷ್ಯಾದಿಂದ ಮಾನವೀಯ ನೆರವು ದೊರಕಿದೆ. ರಷ್ಯಾದಿಂದ 36 ಟನ್ ಮಾನವೀಯ ನೆರವನ್ನು ಹೊತ್ತ ಮೂರು ವಿಮಾನಗಳು ಗುರುವಾರ ಕಾಬೂಲ್‌ಗೆ ಆಗಮಿಸಿವೆ.
ಹಿಟ್ಟು, ಅಡುಗೆ ಎಣ್ಣೆ ಮತ್ತು ಹೊದಿಕೆಗಳು ಈ ನೆರವು ಒಳಗೊಂಡಿವೆ. ಮಾಹಿತಿ ಮತ್ತು ಸಂಸ್ಕೃತಿ ಉಪ ಮಂತ್ರಿ ಮತ್ತು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ನೈಸರ್ಗಿಕ ವಿಕೋಪಗಳ ಉಪ ಮಂತ್ರಿ ಮತ್ತು ಇತರ ಅಧಿಕಾರಿಗಳಿಗೆ ಈ ವಸ್ತುಗಳನ್ನು ಹಸ್ತಾಂತರಿಸಲಾಗಿದೆ.
ಅಫ್ಘಾನಿಸ್ತಾನದ ಜನರ ಪರವಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ರಷ್ಯಾದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಅಫ್ಘಾನ್ ಜನರಿಗೆ ಪರಿಹಾರ ನೆರವು ನೀಡುವುದನ್ನು ಮುಂದುವರಿಸಲು ಇತರ ದೇಶಗಳಿಗೆ ಮನವಿ ಮಾಡಿದ್ದಾರೆ.
ರಷ್ಯಾವು ಅಫ್ಘಾನಿಸ್ತಾನಕ್ಕೆ ಒಟ್ಟು 108 ಟನ್ ಮಾನವೀಯ ನೆರವನ್ನು ಕಳುಹಿಸಲು ಉದ್ದೇಶಿಸಿದೆ, ಅದರಲ್ಲಿ ಮೊದಲ ಬ್ಯಾಚ್ ಅನ್ನು ಗುರುವಾರ ಕಳುಹಿಸಲಾಗಿದೆ ಮತ್ತು ಶೀಘ್ರದಲ್ಲೇ ಇನ್ನಿತರ ವಸ್ತುಗಳನ್ನು ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.