ಧಾರ್ಮಿಕ ಸಮಾರಂಭದಲ್ಲಿ ಕಾಲ್ತುಳಿತ: 29 ಮಂದಿ ಸಾವು
ಮನ್ರೋವಿಯಾ (ಲೈಬೀರಿಯಾ): ಜನೆವರಿ 20: ಲೈಬೀರಿಯಾದ ರಾಜಧಾನಿ ಮನ್ರೋವಿಯಾದ ಉಪನಗರಗಳಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅನಾಹುತವು ಬುಧವಾರ ತಡರಾತ್ರಿ ಅಥವಾ ಗುರುವಾರ ಮುಂಜಾನೆ ರಾತ್ರಿ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸ್ ವಕ್ತಾರ ಮೋಸೆಸ್ ಕಾರ್ಟರ್ ತಿಳಿಸಿದ್ದಾರೆ.
ಸಮಾರಂಭದ ಬಗ್ಗೆ ಇನ್ನು ಸ್ಪಷ್ಟವಾದ ವಿವರಗಳು ಲಭ್ಯವಾಗಿಲ್ಲ. ಲೈಬೀರಿಯಾದಲ್ಲಿ ಫುಟ್ಬಾಲ್ ಮೈದಾನದಲ್ಲಿ ನಡೆದ “ಕ್ರುಸೇಡ್” ಎಂದು ಕರೆಯಲ್ಪಡುವ ಕ್ರಿಶ್ಚಿಯನ್ ಪ್ರಾರ್ಥನಾ ಕೂಟ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.
ಆಫ್ರಿಕಾದ ಅತ್ಯಂತ ಹಳೆಯ ಗಣರಾಜ್ಯವಾದ ಲೈಬೀರಿಯಾವು ಬಡ ದೇಶವಾಗಿದ್ದು, 1989-2003ರ ನಡುವಿನ ಅಂತರ್ಯುದ್ಧಗಳ ನಂತರ ಮತ್ತು 2014-2016ರ ಪಶ್ಚಿಮ ಆಫ್ರಿಕಾದ ಎಬೋಲಾ ಸಾಂಕ್ರಾಮಿಕ ರೋಗದ ನಂತರ ಇನ್ನೂ ಚೇತರಿಸಿಕೊಳ್ಳುತ್ತಿದೆ.