ಉಕ್ರೇನ್‌ನಿಂದ ಭಾರತೀಯರ ಏರ್‌ಲಿಫ್ಟಿಂಗ್: 256 ವಿದ್ಯಾರ್ಥಿಗಳು ಭಾರತದತ್ತ
ಹೊಸದಿಲ್ಲಿ 22 :ಉಕ್ರೇನ್‌ನ ಎರಡು ಪ್ರಾಂತ್ಯಗಳನ್ನು ಸ್ವತಂತ್ರ ರಾಷ್ಟ್ರಗಳೆಂದು ರಷ್ಯಾ ಘೋಷಿಸಿದ ನಂತರ ಎರಡೂ ರಾಷ್ಟ್ರಗಳ ಮಧ್ಯೆದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಉಕ್ರೇನ್ ಮತ್ತು ಅದರ ಗಡಿ ಪ್ರದೇಶಗಳಲ್ಲಿ 20 ಸಾವಿರಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅವರನ್ನು ಸ್ವದೇಶಕ್ಕೆ ಮರಳಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಇಂದು ಬೆಳಗ್ಗೆ ಏರ್ ಇಂಡಿಯಾದ ವಿಶೇಷ ವಿಮಾನವನ್ನು ಉಕ್ರೇನ್‌ಗೆ ಕಳುಹಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಿಂದ 256 ಭಾರತೀಯ ವಿದ್ಯಾರ್ಥಿಗಳು ಇಂದು ದೇಶಕ್ಕೆ ಮರಳಲಿದ್ದಾರೆ.ಏರ್ ಇಂಡಿಯಾ ಫ್ಲೈಟ್ ಡ್ರೀಮ್‌ಲೈನರ್ B-787 ಮೂಲಕ ಇಂದು ರಾತ್ರಿ 10.15ಕ್ಕೆ ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ವಾಪಸ್ ಆಗಲಿದ್ದಾರೆ. ಇದು 200 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೇ ಇನ್ನೂ 4 ವಿಮಾನಗಳು ಕಾರ್ಯನಿರ್ವಹಿಸಲಿವೆ. ಭಾರತದ ರಾಯಭಾರ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೀವ್‌ನಿಂದ ದೆಹಲಿಗೆ 4 ವಿಮಾನಗಳು ಫೆಬ್ರವರಿ 25, ಫೆಬ್ರವರಿ 27 ಮತ್ತು ಮಾರ್ಚ್ 6, 2022 ರಂದು ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.ರಷ್ಯಾ ಉಕ್ರೇನ್‌ನ ಎರಡು ಪ್ರಾಂತ್ಯಗಳನ್ನು ಸ್ವತಂತ್ರ ರಾಷ್ಟ್ರಗಳೆಂದು ಘೋಷಿಸಿದೆ. ಆದರೆ, ರಷ್ಯಾದ ಈ ನಡೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಮಾತನಾಡಿ, “ಉಕ್ರೇನ್ ಮತ್ತು ಅದರ ಗಡಿ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ 20,000ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಈ ಭಾರತೀಯರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ” ಎಂದು ತಿಳಿಸಿದರು.
ಸಂಯಮದಿಂದ ವರ್ತಿಸಿ: ಭಾರತದ ಸಲಹೆ
ರಷ್ಯಾ-ಉಕ್ರೇನ್ ಉದ್ವಿಗ್ನತೆ ಕುರಿತು ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಭಾರತದ ನಿಲುವನ್ನು ಪ್ರಕಟಿಸಿದ್ದಾರೆ. “ರಷ್ಯಾ ಹಾಗೂ ಉಕ್ರೇನ್ ನಡುವಿನ ಉದ್ವಿಗ್ನತೆ ಕಳವಳಕಾರಿ ವಿಷಯವಾಗಿದೆ. ರಷ್ಯಾದ ನಡೆಯಿಂದಾಗಿ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಭಂಗ ಉಂಟು ಮಾಡಲಿದೆ. ಎರಡೂ ರಾಷ್ಟ್ರಗಳು ಸಂಯಮದಿಂದ ವರ್ತಿಸಬೇಕೆಂದು ಭಾರತ ಒತ್ತಾಯಿಸುತ್ತದೆ. ಈ ಸಮಸ್ಯೆಯನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಮಾತ್ರ ಪರಿಹರಿಸಬಹುದಾಗಿದೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ ಸಹ ಅದಕ್ಕಾಗಿ ಸ್ವಲ್ಪ ಸಮಯ ನೀಡಬೇಕೆಂದು” ಭಾರತ ಮನವಿ ಮಾಡಿದೆ.
“ಎಲ್ಲಾ ರಾಷ್ಟ್ರಗಳು ಅಂತರಾಷ್ಟ್ರೀಯ ಭದ್ರತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಈ ಉದ್ವಿಗ್ನತೆಯನ್ನು ಶೀಘ್ರವಾಗಿ ಪರಿಹರಿಸಬೇಕಾಗಿದ್ದು, ಎಲ್ಲ ರಾಷ್ಟ್ರಗಳಿಗೂ ಈ ಸಲಹೆ ಸ್ವೀಕೃತಗೊಳ್ಳುವಂತಾಗಬೇಕು. ರಾಜತಾಂತ್ರಿಕ ಪ್ರಯತ್ನಗಳನ್ನು ತಕ್ಷಣವೇ ಹೆಚ್ಚಿಸಬೇಕಾಗಿದೆ” ಎಂದು ತಿರುಮೂರ್ತಿ ಹೇಳಿದರು.