2022ರ ಫ್ರೆಂಚ್ ಓಪನ್: ಸೆಮಿಫೈನಲ್ ತಲುಪಿದ ಕ್ರೊಯೇಷಿಯಾದ ಮರಿನ್ ಸಿಲಿಕ್
ಪ್ಯಾರೀಸ್: ಜೂನ್ 02: ಫಿಲಿಪ್-ಚಾಟ್ರಿಯರ್ ನಲ್ಲಿ ನಡೆದ 2022ರ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಕ್ರೊಯೇಷಿಯಾದ ಮರಿನ್ ಸಿಲಿಕ್ ಅವರು ಬುಧವಾರ ಐದು ಸೆಟ್ ಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ಸೋಲಿಸಿ ಸೆಮಿಫೈನಲ್ ಗೆ ಅರ್ಹತೆ ಗಳಿಸಿದ್ದಾರೆ.
ಉತ್ತಮ ಆಟಗಾರ ರುಬ್ಲೆವ್ ಮೊದಲ ಸೆಟ್ ಅನ್ನು ಗೆಲ್ಲುವ ಮೂಲಕ ಪಂದ್ಯವನ್ನು ಆರಂಭಿಸಿದರು. ಆದರೆ ಧೃತಿಗೆಡದ ಸಿಲಿಕ್ ಅದ್ಭುತ ಆಟವಾಡಿ ಎರಡು ಮತ್ತು ಮೂರನೇ ಸೆಟ್ಗಳನ್ನು ತಮ್ಮದಾಗಿಸಿಕೊಂಡರು. ರುಬ್ಲೆವ್ ತಮ್ಮ ಪರಿಶ್ರಮದಿಂದ ನಾಲ್ಕನೇ ಸೆಟ್ ಅನ್ನು ಗೆದ್ದು, ಮುಂದಿನ ಸೆಟ್ ನತ್ತ ಮತ್ತೆ ಹೆಜ್ಜೆ ಹಾಕಿದರು.
ಐದನೇ ಮತ್ತು ಅಂತಿಮ ಸೆಟ್ನಲ್ಲಿ, ಸಿಲಿಕ್ ಮತ್ತು ರೂಬ್ಲಿ ಇಬ್ಬರೂ ಪರಸ್ಪರ ಸ್ಪರ್ಧೆಗಿಳಿದರು. ಆದರೆ ಅದು ಟೈ ಬ್ರೇಕರ್ ಆಯಿತು. ರುಬ್ಲೆವ್ ಅಲ್ಲಿಂದ ಪರಿಣಾಮಕಾರಿಯಾಗಿ ಆಟ ಮುಂದುವರೆಸಿದರು. ಆದರೆ ಅಂಜದ ಮರಿನ್ ಸಿಲಿಕ್ ತಮ್ಮ ಪ್ರದರ್ಶನ ಮುಂದುವರೆಸುತ್ತಲೇ ಇದ್ದರು.
ಕೊನೆಗೆ 2014 ರಲ್ಲಿ ಯುಎಸ್ ಓಪನ್ ಗೆದ್ದು ಮೂರು ವರ್ಷಗಳ ನಂತರ ವಿಂಬಲ್ಡನ್ ಫೈನಲಿಸ್ಟ್ ಆಗಿದ್ದ 33 ವರ್ಷದ ಮರಿನ್ ಸಿಲಿಕ್ ನಿರ್ಣಾಯಕ-ಸೆಟ್ ಟೈ-ಬ್ರೇಕ್ ನಂತರ 5-7 6-3 6-4 3-6 7-6 ರಲ್ಲಿ ಗೆದ್ದು ಬೀಗಿದರು. ಈ ಮೂಲಕ ಸಿಲಿಕ್ ಅವರು ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮರ್ರೆ ನಂತರ ಗ್ರ್ಯಾಂಡ್ ಸ್ಲಾಮ್ನ ಸೆಮಿಫೈನಲ್ ತಲುಪಿದ ಐದನೇ ಸಕ್ರಿಯ ಆಟಗಾರ ಎಂಬ ಖ್ಯಾತಿಗೆ ಒಳಗಾದರು