ಕೋರೆ ಕ್ರೆಡಿಟ್ ಸೊಸೈಟಿ ಸಿಬ್ಬಂದಿಗೆ ಶೇ.15 ವೇತನ ಹೆಚ್ಚಳ : ಪದ್ಮಶ್ರೀ ಗೌರವದ ಸಂಭ್ರಮದಲ್ಲಿ ಸಿಬ್ಬಂದಿಗೆ ವೇತನ ಹೆಚ್ಚಳದ ಉಡುಗೊರೆ
ಚಿಕ್ಕೋಡಿ 23 : ಜಾಗತಿಕ ಆರ್ಥಿಕ ಏರುಪೇರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚದ ನಡುವೆಯೂ ಸಿಬ್ಬಂದಿ ವರ್ಗದ ಹಿತವನ್ನು ಕಾಪಾಡುವ ಉದ್ದೇಶದಿಂದ ಡಾ. ಪ್ರಭಾಕರ ಕೋರೆ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಎಲ್ಲಾ 380 ಸಿಬ್ಬಂದಿಗಳ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ ತಿಳಿಸಿದರು. ತಾಲೂಕಿನ ಅಂಕಲಿ ಪಟ್ಟಣದ ಆಡಳಿತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು. ಪದ್ಮಶ್ರೀ ಪ್ರಶಸ್ತಿ ಲಭಿಸಿರುವ ಸಂತಸದ ಸಂದರ್ಭದಲ್ಲಿ ಸಿಬ್ಬಂದಿಗೆ ಈ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯು 11,11,331 ಸದಸ್ಯರನ್ನು ಹೊಂದಿದ್ದು, ರೂ.4.64 ಕೋಟಿ ಶೇರು ಬಂಡವಾಳ ಹೊಂದಿದೆ. ರೂ.167.02 ಕೋಟಿ ಕಾಯ್ದಿಟ್ಟ ಹಾಗೂ ಇತರ ನಿಧಿಗಳೊಂದಿಗೆ ರೂ.1,638 ಕೋಟಿ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ ರೂ.1,202.02 ಕೋಟಿ ಸಾಲ ವಿತರಿಸಿದ್ದು, ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೂ.572.85 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ವಿವರಿಸಿದರು. ಸಂಸ್ಥೆಯು ರೂ.1,809.67 ಕೋಟಿ ದುಡಿಯುವ ಬಂಡವಾಳದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ರೂ.23,248.92 ಕೋಟಿ ವಹಿವಾಟು ನಡೆಸಿ ರೂ.27.37 ಕೋಟಿ ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ 61 ಶಾಖೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ 56 ಮಹಿಳಾ ಸಿಬ್ಬಂದಿ, 253 ಪುರುಷ ಸಿಬ್ಬಂದಿ ಹಾಗೂ 71 ಪಿಗ್ಗಿ ಸಂಗ್ರಹಕರನ್ನು ಒಳಗೊಂಡಂತೆ ಒಟ್ಟು 380 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಿಬ್ಬಂದಿ ಕಲ್ಯಾಣಕ್ಕಾಗಿ ಸಂಸ್ಥೆಯು ಆರೋಗ್ಯ ವಿಮೆ, ಸಾಮಾನ್ಯ ವಿಮೆ, ಗ್ರಾಚ್ಯುಟಿ, ಇಪಿಎಫ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ರೂ.3 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯವಿದ್ದು, ಈಗಾಗಲೇ ಏಳು ಸಿಬ್ಬಂದಿ ರೂ.4.5 ಲಕ್ಷದವರೆಗೆ ಪ್ರಯೋಜನ ಪಡೆದಿದ್ದಾರೆ. ವಾರ್ಷಿಕ ವೇತನದ ಐದು ಪಟ್ಟು ಸಾಮಾನ್ಯ ವಿಮೆ ಸೌಲಭ್ಯವೂ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಹೊಸದಾಗಿ ನೇಮಕಗೊಂಡ ಏಳು ಸಿಬ್ಬಂದಿಗೆ ತಲಾ ರೂ.7,500 ಪ್ರೋತ್ಸಾಹಧನ ದೊರೆತಿದ್ದು, ಸಂಸ್ಥೆಗೂ ರೂ.50 ಸಾವಿರ ಪ್ರೋತ್ಸಾಹಧನ ಸಂದಾಯವಾಗಿದೆ. ಜೊತೆಗೆ ಗರಿಷ್ಠ ವೇತನ ಆಧಾರಿತ ಪಿಂಚಣಿ, ವಾರ್ಷಿಕ ವೇತನದ ಶೇ.20ರಷ್ಟು ಬೋನಸ್ ಹಾಗೂ ಎಕ್ಸ್ಗ್ರೇಷಿಯಾ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ರಾಜ್ಯ ನೌಕರರ ವಿಮಾ ನಿಗಮದ ಮೂಲಕ 175 ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಪ್ರಯೋಜನ ಪಡೆಯುತ್ತಿದ್ದು, ಸಂಸ್ಥೆಯ ಸ್ವಂತ ಟ್ರಸ್ಟ್ ಮೂಲಕ ಖಾಸಗಿ ಪಿಂಚಣಿ ಯೋಜನೆಯನ್ನೂ ಆರಂಭಿಸಲಾಗಿದೆ. ವಿ-ಕೇರ್ ಆರೋಗ್ಯ ವಿಮೆ ಯೋಜನೆಯಡಿ ರೂ.25 ಸಾವಿರದ ಹೆಚ್ಚುವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ವಿವಿಧ ಶಾಖೆಗಳಿಗೆ ಆಯ್ಕೆಯಾದ 35 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿದಗೌಡಾ ಮಗದುಮ್ಮ, ನಿರ್ದೇಶಕರಾದ ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹೀರೆಕುರಬರ, ಬಸನಗೌಡಾ ಅಸಂಗಿ, ಡಾ. ಸುಕುಮಾರ ಚೌಗಲೆ, ಅಮಿತ ಜಾಧವ, ಪ್ರಫುಲ ಶೆಟ್ಟಿ, ಅಶೋಕ ಚೌಗಲಾ, ಅನೀಲ ಪಾಟೀಲ, ವಿವೇಕಾನಂದ ಕಮತೆ, ಶ್ರೀಕಾಂತ ಉಮರಾಣೆ, ಶೋಭಾ ಜಕಾತ, ಶೈಲಾಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಕರೋಶಿ ಉಪಸ್ಥಿತರಿದ್ದರು.