ಕಲುಷಿತ ನೀರು ಸೇವಿಸಿ 119 ಮಕ್ಕಳು ಅಸ್ವಸ್ಥ
119 children fall ill after drinking contaminated water
ಕಲುಷಿತ ನೀರು ಸೇವಿಸಿ 119 ಮಕ್ಕಳು ಅಸ್ವಸ್ಥ
ಚಿಕ್ಕೋಡಿ 13: ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಅಲ್ಪಸಂಖ್ಯಾತ ಮೋರಾರ್ಜಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಮತ್ತು ಉಪಹಾರ ಸೇವನೆಯ ಪರಿಣಾಮವಾಗಿ ಅಸ್ವಸ್ಥರಾದ ಮಕ್ಕಳ ಸಂಖ್ಯೆ 119ಕ್ಕೆ ಏರಿಕೆಯಾಗಿದೆ. ಇದರದಲ್ಲಿ 11 ಮಕ್ಕಳಿಗೆ ಗಂಭಿರವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ಗುರುವಾರ ರಾತ್ರಿ ವಸತಿ ನಿಲಯದಲ್ಲಿ ಕೊಳೆತ ತರಕಾರಿ ಪಲ್ಲೆ ಮಕ್ಕಳಿಗೆ ಉಣಬಡಿಸಿದ್ದರಿಂದ ವಸತಿ ನಿಲಯದ ಮಕ್ಕಳಿಗೆ ಶುಕ್ರವಾರ ಬೆಳಿಗ್ಗೆ ವಾಂತಿ-ಭೇದಿ, ಹೊಟ್ಟೆ ನೋವು ಮತ್ತು ಜ್ವರ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಶುಕ್ರವಾರ ಸಂಜೆ ಹೊತ್ತಿಗೆ 86 ಮಕ್ಕಳು ಅಸ್ವಸ್ಥರಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೆ ಶನಿವಾರ ಬೆಳಿಗ್ಗೆ ಅಸ್ವಸ್ಥರಾದ ಮಕ್ಕಳ ಸಂಖ್ಯೆ 119 ಕ್ಕೆ ಏರಿಕೆಯಾಗಿದ್ದು ಇದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
ವಸತಿ ಶಾಲೆಯಲ್ಲಿ ಎಂದಿನಂತೆ ಮಕ್ಕಳು ಬೆಳಿಗ್ಗೆ ಉಪ್ಪಿಟ್ಟು ಉಪಹಾರ ಸೇವೆ ಮಾಡಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ವಾಂತಿ, ಹೊಟ್ಟೆನೋವು ಹಾಗೂ ತಲೆಸುತ್ತು ಕಾಣಿಸಿಕೊಂಡಿದ್ದು ಕೂಡಲೇ ಅಸ್ವಸ್ಥ ಮಕ್ಕಳನ್ನು ತುರ್ತು ಚಿಕಿತ್ಸೆಗಾಗಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದ್ದರು.
ಚಿಕ್ಕೋಡಿ ಪಟ್ಟಣದಿಂದ 10 ಕಿ.ಮೀ ಅಂತರದಲ್ಲಿ ಇರುವ ಹಿರೇಕೋಡಿ ಗ್ರಾಮದ ಅಲ್ಪಸಂಖ್ಯಾತ ಮೋರಾರ್ಜಿ ವಸತಿ ಶಾಲೆಯು 6 ನೆಯ ತರಗತಿಯಿಂದ ಪಿಯುಸಿ ವರೆಗೆ ಸುಮಾರು 400 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪಿಯುಸಿ ಮತ್ತು ಪ್ರೌಢ ಶಾಲೆಯ ವಸತಿ ನಿಲಯ ಪ್ರತ್ಯೇಕ ಇರುವುದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಮಾತ್ರ ಈ ಸಮಸ್ಯೆ ಕಂಡು ಬಂದಿದೆ. ಪಿಯುಸಿ ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ.
ಆಸ್ಪತ್ರೆಗೆ ಶಾಸಕ ಗಣೇಶ ಹುಕ್ಕೇರಿ ಭೇಟಿ: ಕಲುಷಿತ ಆಹಾರ ಮತ್ತು ನೀರಿನಿಂದ ಅಸ್ವಸ್ಥರಾದ ಮಕ್ಕಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಶನಿವಾರ ಆಸ್ಪತ್ರೆಗೆ ಶಾಸಕ ಗಣೇಶ ಹುಕ್ಕೇರಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಶಾಸಕರ ಜೊತೆ ಚಿಕ್ಕೋಡಿ ಸಂಪಾದನ ಸ್ವಾಮೀಜಿ ಭೇಟಿ ನೀಡಿ ಮಕ್ಕಳು ಶೀಘ್ರದಲ್ಲಿ ಗುಣಮುಖರಾಗಲೇಂದು ಹಾರೈಸಿದರು.
ಎರಡು ದಿನಗಳಿಂದ ಆಸ್ಪತ್ರೆಯಲ್ಲಿಯೇ ಬಿಡು ಬಿಟ್ಟ ಅಧಿಕಾರಿಗಳು: ಕಲುಷಿತ ಆಹಾರದಿಂದ ಅಸ್ವಸ್ಥರಾದ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವ ಪರಿಣಾಮ ಎಡಿಎಚ್‌ಓ ಡಾ,ಎಸ್.ಎಸ್.ಗಡೇದ, ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ ರಾಜೇಶ ಬುರ್ಲಿ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ವಣ್ಣೂರ, ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಮತ್ತು ಡಿಡಿಪಿಐ ಸೀತಾರಾಮು, ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ ಚೌಗಲಾ ಆಸ್ಪತ್ರೆಯಲ್ಲಿ ಠಿಕಾಣಿ ಹೂಡಿ ಮಕ್ಕಳ ಆರೋಗ್ಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪೋಷಕರು ಒತ್ತಾಯ: ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಪ್ರತಿದಿನ ಮಕ್ಕಳು ಇದೇ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಕ್ಕಳ ಪೋಷಕರು ಸರ್ಕಾರವನ್ನು ಒತ್ತಾಯಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 