ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಸಾವಿನ ಸಂಖ್ಯೆ 57ಕ್ಕೆ ಏರಿಕೆ
ಪೇಶಾವರ 05 : ವಾಯುವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ನಮಾಜ್ ವೇಳೆ ಜನನಿಬಿಡ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 57ಕ್ಕೆ ಏರಿದೆ ಮತ್ತು ಸುಮಾರು 200 ಮಂದಿ ಗಾಯಗೊಂಡಿದ್ದಾರೆ.ಪೇಶಾವರದ ಕಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ನಮಾಜ್ ಮಾಡುವಾಗ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್-ಪಖ್ತುಂಖ್ವಾದ ಪ್ರಾಂತೀಯ ರಾಜಧಾನಿ ಪೇಶಾವರದಲ್ಲಿ ನಡೆದ ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ತಕ್ಷಣವೇ ವಹಿಸಿಕೊಂಡಿಲ್ಲ. ಆದಾಗ್ಯೂ, ಇಸ್ಲಾಮಿಕ್ ಸ್ಟೇಟ್ ಮತ್ತು ಪಂಥೀಯ ಉಗ್ರಗಾಮಿ ಗುಂಪುಗಳು ಈ ಹಿಂದೆ ಶಿಯಾಗಳನ್ನು ಗುರಿಯಾಗಿಸಿಕೊಂಡು ನಡೆದ ಮಾರಣಾಂತಿಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿವೆ.ಲೇಡಿ ರೀಡಿಂಗ್ ಹಾಸ್ಪಿಟಲ್ (LRH) ವಕ್ತಾರ ಮೊಹಮ್ಮದ್ ಅಸಿಮ್, ಸ್ಫೋಟದಲ್ಲಿ ಕನಿಷ್ಠ 57 ಜನರು ಸಾವನ್ನಪ್ಪಿದ್ದಾರೆ ಮತ್ತು 194 ಮಂದಿ ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದರು.ಖೈಬರ್-ಪಖ್ತುಂಖ್ವಾ ಸರ್ಕಾರದ ವಕ್ತಾರ ಬ್ಯಾರಿಸ್ಟರ್ ಮೊಹಮ್ಮದ್ ಅಲಿ ಸೈಫ್ ಅವರು ಸ್ಫೋಟವನ್ನು ಆತ್ಮಹತ್ಯಾ ಬಾಂಬ್ ದಾಳಿ ಎಂದು ಹೇಳಿದ್ದಾರೆ. ದಾಳಿಯಲ್ಲಿ ಇಬ್ಬರು ಉಗ್ರರು ಶಾಮೀಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅಧ್ಯಕ್ಷ ಆರಿಫ್ ಅಲ್ವಿ ಸ್ಫೋಟವನ್ನು ಖಂಡಿಸಿದ್ದು, ಜೀವ ಕಳೆದುಕೊಂಡವರ ಬಗ್ಗೆ ದುಃಖ ವ್ಯಕ್ತಪಡಿಸಿದರು.ಪೇಶಾವರ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಇಮ್ರಾನ್ ಖಾನ್ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಪ್ರಾಂತ್ಯದ ಮುಖ್ಯ ಕಾರ್ಯದರ್ಶಿ ಮತ್ತು ಐಜಿಯಿಂದ ಘಟನೆಯ ವರದಿಯನ್ನು ಕೇಳಿದರು.ಖೈಬರ್-ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಸ್ಫೋಟವನ್ನು ಖಂಡಿಸಿದರು ಮತ್ತು ಈ ಹೇಯ ಕೃತ್ಯದ ಅಪರಾಧಿಗಳಿಗೆ ಶಿಕ್ಷೆ ನೀಡುವಮತೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.