ಮುಂಡಗೋಡದಲ್ಲಿ ಕಬ್ಬಿನ ಟ್ರ್ಯಾಕ್ಟರ್ ಪಲ್ಟಿ ಕಬ್ಬು ರಸ್ತೆ ಮೇಲೆ ಹರಡಿ, 3 ಬೈಕ್‌ಗಳು ಸಿಲುಕಿ ಭಾರೀ ಜಖಂ
ಮುಂಡಗೋಡ 04: ಪಟ್ಟಣದ ಬನ್ನಿಗಟ್ಟಿ ಸಮೀಪದ ಪೋಸ್ಟ್ ಕಚೇರಿ ಮುಂಭಾಗದಲ್ಲಿ ರವಿವಾರ ಬೆಳಿಗ್ಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ. ಯಲ್ಲಾಪುರ ರಸ್ತೆಯಿಂದ ಮುಂಡಗೋಡ ಮಾರ್ಗವಾಗಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ಬನ್ನಿಗಟ್ಟಿ ಪೋಸ್ಟ್ ಕಚೇರಿ ಎದುರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಟ್ರ್ಯಾಕ್ಟರ್‌ಗೆ ಜೋಡಿಸಿದ್ದ ಟ್ರೋಲಿ ಕೊಂಡಿ ಕಳಚಿಕೊಂಡು ರಸ್ತೆ ಬದಿಗೆ ಪಲ್ಟಿಯಾಗಿದೆ. ಪಲ್ಟಿಯಾದ ಟ್ರೋಲಿಯಲ್ಲಿದ್ದ ಭಾರೀ ಪ್ರಮಾಣದ ಕಬ್ಬು ರಸ್ತೆ ಮೇಲೆ ಹರಡಿದ್ದು, ಅದರ ಅಡಿಯಲ್ಲಿ ಮೂರು ಬೈಕ್‌ಗಳು ಸಿಲುಕಿ ಭಾರೀ ಪ್ರಮಾಣದಲ್ಲಿ ಜಖಂಗೊಂಡಿವೆ.
ಘಟನೆ ಸಮಯದಲ್ಲಿ ಸ್ಥಳದಲ್ಲಿದ್ದ ಜನರು ಭಾರೀ ಆತಂಕಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರು ತಕ್ಷಣ ಧಾವಿಸಿ ಚಾಲಕನಿಗೆ ಸಹಾಯ ಮಾಡಿದರು. ಕಬ್ಬು ರಸ್ತೆ ಮೇಲೆ ಹರಡಿದ್ದುದರಿಂದ ಬನ್ನಿಗಟ್ಟಿ-ಮುಂಡಗೋಡ ಮುಖ್ಯ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಾಹನ ತೆರವು ಕಾರ್ಯಾಚರಣೆ ನಡೆಸಿ ಸಂಚಾರವನ್ನು ಪುನಃ ಸುಗಮಗೊಳಿಸಿದರು.