ರೋಗಿಯ ದೊಡ್ಡ ಕರುಳಿನಿಂದ ಜಠರ, ಅನ್ನನಾಳ ನಿರ್ಮಿಸಿದ ಎಸ್. ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡ
ರಾಣೆಬೆನ್ನೂರು 25 : ದಾವಣಗೆರೆ ಅತ್ಯುತ್ತಮ ದರ್ಜೆಯ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿರುವ ಇಲ್ಲಿನ ಎಸ್. ಎಸ್. ನಾರಾಯಣ ಹೆಲ್ತ್ ಸೂಪರ್ಸ್ಪೆಷಾಲಿಟಿ ಸೆಂಟರ್ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ ಇದರ ಮುಂದುವರಿದ ಭಾಗವಾಗಿ ಇಲ್ಲಿನ ವೈದ್ಯರು ರೋಗಿಯೊಬ್ಬರ ದೊಡ್ಡ ಕರುಳಿನ ಭಾಗವನ್ನೇ ಉಪಯೋಗಿಸಿ ಜಠರ ಹಾಗೂ ಅನ್ನನಾಳವನ್ನು ನಿರ್ಮಿಸಿರುವುದಾಗಿ ಡಾ. ಹನುಮಂತ ನಾಯ್ಕ ಹೇಳಿದರು. ಅವರು ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರಿ್ಡಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಆಸ್ಪತ್ರೆಯ ವಿಶೇಷತೆ ಕುರಿತು ಮಾತನಾಡಿದರು.
ಸುಮಾರು 40 ವರ್ಷ ವಯಸ್ಸಿನ ಪುರುಷರೊಬ್ಬರು ಕೆಲವು ತಿಂಗಳುಗಳ ಹಿಂದೆ, ಆಮ್ಲೀಯ ಟಾಯ್ಲೇಟ್ ಕ್ಲೀನರ್ ಸೇವಿಸಿ ಗಂಭೀರ ಸ್ಥಿತಿಯಲ್ಲಿ ನಮ್ಮ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಗೆ ದಾಖಲಾಗಿದ್ದರು, ಆಗ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಸ್ಟ್ ಡಾ. ಆರ್.ಕೆ. ಹನುಮಂತ್ ನಾಯ್ಕ್ ಅವರ ನೇತೃತ್ವದ ತಂಡ ರೋಗಿಯ ಸಂಪೂರ್ಣವಾಗಿ ಸುಟ್ಟು ಹೋದ ಜಠರ ಹಾಗೂ ಅನ್ನನಾಳವನ್ನು ಸುಮಾರು 6 ತಾಸುಗಳ ಕಾಲ ಸುಧೀರ್ಘ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿ ರೊಗಿಗೆ ಜೆಜುನೋಸ್ಟೊಮಿ ಫೀಡಿಂಗ್ ಶಸ್ತ್ರಚಿಕಿತ್ಸೆ ಮೂಲಕ ನೇರವಾಗಿ ಸಣ್ಣ ಕರುಳಿಗೆ ಟ್ಯೂಬ್ ಮೂಲಕ ದ್ರವರೂಪದ ಪೌಷ್ಟಿಕಾಂಶಗಳು, ಓಷಧಗಳು ಮತ್ತು ನೀರನ್ನು ನೇರವಾಗಿ ಕರುಳಿಗೆ ನೀಡುವಂತೆ ಮಾಡಲಾಗಿತ್ತು ಎಂದರು.
ಅಂದು ಆರೋಗ್ಯದಲ್ಲಿ ಚೇತರಿಕೆ ಕಂಡು ಅವರು ಮನೆಗೆ ತೆರಳಿದ್ದರು. ಇದಾದ ಕೆಲವು ತಿಂಗಳ ನಂತರ ಪುನ: ಡಾ. ಹನುಮಂತ ನಾಯ್ಕ್ ಅವರ ತಂಡ ಟ್ಯೂಬ್ನ್ನು ತೆಗೆದು ಹಾಕಿ ಜಠರ ಹಾಗೂ ಅನ್ನನಾಳವನ್ನು ರೋಗಿಯ ದೊಡ್ಡ ಕರುಳಿನ ಭಾಗವನ್ನು ಉಪಯೋಗಿಸಿಕೊಂಡು ನಿರ್ಮಿಸಿದ್ದಾರೆ. ಇದರಿಂದಾಗಿ ಅವರು ಸಾಮಾನ್ಯರಂತೆ ಆಹಾರ ಸೇವನೆ ಮಾಡಬಹುದಾಗಿದೆ. ಸುಮಾರು 12 ತಾಸು ನಡೆದ ಅತ್ಯಂತ ಸಂಕೀರ್ಣ ಹಾಗೂ ಮಹತ್ವದ ಈ ಶಸ್ತ್ರಚಿಕಿತ್ಸೆ (ಈಸೋಫೇಗಸ್ ಕೊಲೊಪ್ಲಾಸ್ಟಿ) ಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ಚಿಕಿತ್ಸೆ ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೆರವೇರಿದೆ ಎಂಬುದು ವಿಶೇಷ. ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಲು ವಿಶೇಷ ಪರಿಣಿತಿ ಅವಶ್ಯವಾಗಿದ್ದು ನಾರಾಯಣ ಹೆಲ್ತ್ ನಲ್ಲಿ ಅತ್ಯಂತ ನುರಿತ ವೈದ್ಯರು ರೋಗಿಗಳ ಚಿಕಿತ್ಸೆಗೆ ಸದಾ ಲಭ್ಯವಿರುತ್ತಾರೆ. ಎಂದರು ಡಾ. ನಾಯ್ಕ್ ಮಾತನಾಡಿ“ಇಂತಹ ಶಸ್ತ್ರಚಿಕಿತ್ಸೆಗಳು ಅಪರೂಪ ಮತ್ತು ತಾಂತ್ರಿಕವಾಗಿ ತುಂಬಾ ಸವಾಲಿನವು. ಒಂದು ಅಂಗವನ್ನು ಬಳಸಿ ಆಹಾರ ಸಾಗುವ ಮಾರ್ಗವನ್ನು ಮರು ನಿರ್ಮಿಸುವುದು ಅತ್ಯಂತ ನಿಖರತೆ ಮತ್ತು ತಂಡದ ಶ್ರದ್ಧೆಯನ್ನು ತೋರಿಸುತ್ತದೆ.
ಶಸ್ತ್ರಚಿಕಿತ್ಸೆ ಸುಮಾರು 12 ಗಂಟೆಗಳ ಕಾಲ ನಡೆಯಿತು. ರೋಗಿ ಚೇತರಿಸಿಕೊಂಡು ಎರಡು ವಾರಗಳಲ್ಲಿ ಬಿಡುಗಡೆಯಾದರು. ಆರು ವಾರಗಳಲ್ಲಿ ನಾಲ್ಕು ಕಿಲೋ ತೂಕ ಹೆಚ್ಚಿಸಿಕೊಂಡು ಈಗ ಕೆಲಸಕ್ಕೆ ಹಿಂತಿರುಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ,” ಎಂದರು. ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ಮಾತನಾಡಿ, “ಈ ಯಶಸ್ವಿ ಚಿಕಿತ್ಸೆ ನಮ್ಮ ವೈದ್ಯಕೀಯ ತಂಡದ ಪರಿಣತಿ ಮತ್ತು ಬದ್ಧತೆಗೆ ಸ್ಪಷ್ಟ ನಿದರ್ಶನ. ಹೊಟ್ಟೆ ಮತ್ತು ಅನ್ನನಾಳವನ್ನು ದೊಡ್ಡ ಕರುಳಿನ ಭಾಗದ ಸಹಾಯದಿಂದ ಪುನರ್ ನಿರ್ಮಿಸುವ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟ ಮತ್ತು ಸೂಕ್ಷ್ಮವಾದ ಪ್ರಕ್ರಿಯೆ. ಡಾ. ಹನುಮಂತ ನಾಯ್ಕ್ ಹಾಗೂ ಅವರ ತಂಡ ಈ ಕ್ಲಿಷ್ಟಕರ್ ಶಸ್ತ್ರಚಿಕಿತ್ಸೆ ನೀಡುವ ಮೂಲಕ, ಈ ಪ್ರದೇಶದಲ್ಲಿ ಹೊಸ ವೈದ್ಯಕೀಯ ಮಾನದಂಡವನ್ನು ಸ್ಥಾಪಿಸಿದ್ದಾರೆ. ಜೀವ ಇನ್ನೆನು ಕಳೆದುಕೊಂಡಿದ್ದ ವ್ಯಕ್ತಿಯ ಜೀವನವನ್ನು ಗೌರವಪೂರ್ಣವಾಗಿ ಪುನಃ ಆರಂಭಿಸಲು ಸಾಧ್ಯವಾಗಿರುವುದು ನಮಗೆ ಹೆಮ್ಮೆಯ ಸಂಗತಿ. ಎಂದು ಹರ್ಷ ವ್ಯಕ್ತಪಡಿಸಿದ ಅವರು ಆಸ್ಪತ್ರೆಯ ಉದ್ದೇಶ ಎಂದಿಗೂ ಅತಿ ಕಷ್ಟದ ಪ್ರಕರಣಗಳಿಗೂ ವಿಶ್ವದರ್ಜೆಯ ಚಿಕಿತ್ಸೆ ನೀಡುವುದು ಇಲ್ಲಿನ ವಿಶೇಷತೆಯಾಗಿದೆ ಎಂದು ಹೇಳಿದರು.