ಮಹಾ: ವಿದರ್ಭದಲ್ಲಿ ಸಾಲದ ಹೊರೆ, ಬೆಳೆ ನಷ್ಟದಿಂದಾಗಿ ಮೂವರು ರೈತರು ಆತ್ಮಹತ್ಯೆ
ನಾಗಪುರ, ಜುಲೈ 28: ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಮೂವರು ರೈತರು ಪ್ರತ್ಯೇಕ ಘಟನೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹೆಚ್ಚುತ್ತಿರುವ ಸಾಲ, ನಿರಂತರ ಬೆಳೆ ವೈಫಲ್ಯ ಮತ್ತು ಆರ್ಥಿಕ ಸಂಕಷ್ಟವೇ ಈ ಘಟನೆಗಳಿಗೆ ಪ್ರಮುಖ ಕಾರಣಗಳೆಂದು ಹೇಳಲಾಗಿದೆ.
ಮೃತ ರೈತರನ್ನು ಯವತ್ಮಾಳ್ ಜಿಲ್ಲೆಯ ಭಾಂಬ್ ಗ್ರಾಮದ ರಾಜು ಚುದ್ದುಲ್ಕೆ (49), ಭಂಡಾರಾ ಜಿಲ್ಲೆಯ ಬೋಥ್ಲಿ ಗ್ರಾಮದ ಉಮೇಶ್ ಬಾಗ್ಮಾರೆ (37) ಮತ್ತು ಅಮರಾವತಿ ಜಿಲ್ಲೆಯ ತರೋಡಾ (ದೋಮಕ) ಗ್ರಾಮದ ಪವನ್ ಭಾಕ್ರೆ (45) ಎಂದು ಗುರುತಿಸಲಾಗಿದೆ.
ಯವತ್ಮಾಳ್ ಜಿಲ್ಲೆಯ ರಾಳೇಗಾಂವ್ ತಾಲೂಕಿನ ಭಾಂಬ್ ಗ್ರಾಮದ ನಿವಾಸಿಯಾಗಿದ್ದ ಚುದ್ದುಲ್ಕೆ ಅವರು ಮುಧಾಪುರ ಉಜಾಡ್ ಪ್ರದೇಶದಲ್ಲಿ 1.39 ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದರು. ಅವರ ಮೇಲೆ ಬೆಳೆ ಸಾಲದ ಬಾಕಿ ಇತ್ತು. ಕುಟುಂಬದವರ ಪ್ರಕಾರ, ಅವರು ಸರ್ಕಾರದ ರೈತರ ಸಾಲ ಮನ್ನಾ ಯೋಜನೆಯ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು.
ಜುಲೈ 25ರಂದು ಅವರು ರಾಳೇಗಾಂವ್ನ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಶಾಖೆಗೆ ತೆರಳಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿದ್ದರು. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಅವರು ನಿರಾಶೆಯಿಂದ ಮನೆಗೆ ಮರಳಿದರು ಎನ್ನಲಾಗಿದೆ. ಬಳಿಕ ಅದೇ ರಾತ್ರಿ ಸುಮಾರು 10 ಗಂಟೆಗೆ ಅವರು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಘಟನೆಯಲ್ಲಿ, ಭಂಡಾರಾ ಜಿಲ್ಲೆಯ ಲಾಖಾಂದುರ್ ತಾಲೂಕಿನ ಬೋಥ್ಲಿ ಗ್ರಾಮದ ರೈತ ಉಮೇಶ್ ಬಾಗ್ಮಾರೆ ಅವರು ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಸಂಭವಿಸಿದ ನಿರಂತರ ಬೆಳೆ ನಷ್ಟದಿಂದ ಅವರು ಭಾರಿ ಸಾಲದ ಸುಳಿಗೆ ಸಿಲುಕಿದ್ದರು. ಅವರು ಮೂರು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗಿದೆ.
ಅಮರಾವತಿ ಜಿಲ್ಲೆಯಲ್ಲಿ, ಮೊರ್ಶಿ ತಾಲೂಕಿನ ತರೋಡಾ (ದೋಮಕ) ಗ್ರಾಮದ ಪವನ್ ಭಾಕ್ರೆ ಅವರು ತಮ್ಮ ಕೃಷಿ ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಅವರು ಆತ್ಮಹತ್ಯೆ ಪತ್ರದಲ್ಲಿ ಕೆಲವು ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿದ್ದರು.
ಭಾಕ್ರೆ ಅವರು ಕೆಲವು ವರ್ಷಗಳ ಹಿಂದೆ ಖಾಸಗಿ ಸಾಲದಾತರಿಂದ ಶೇ. 2.50ರಷ್ಟು ಬಡ್ಡಿದರದಲ್ಲಿ ₹1.85 ಲಕ್ಷ ಸಾಲ ಪಡೆದಿದ್ದರು. ಅದಕ್ಕಾಗಿ ತಮ್ಮ ಕೃಷಿ ಭೂಮಿಯನ್ನು ಅಡಮಾನ ಇಟ್ಟಿದ್ದರು. ಅವರು ₹2.10 ಲಕ್ಷ ಮರುಪಾವತಿ ಮಾಡಿದರೂ, ಜಮೀನನ್ನು ಹಿಂದಿರುಗಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.