ಮತ್ತೆ ಜೊಲ್ಲೆ ಮನೆ ಕದ ತಟ್ಟಿದ ಹಿರಾಶುಗರ ನಿರ್ದೇಶಕರು : ಎಬಿ. ಕತ್ತಿಗೆ ಹಿನ್ನಡೆ
ಮತ್ತೆ ಜೊಲ್ಲೆ ಮನೆ ಕದ ತಟ್ಟಿದ ಹಿರಾಶುಗರ ನಿರ್ದೇಶಕರು : ಎಬಿ. ಕತ್ತಿಗೆ ಹಿನ್ನಡೆ
ಸಂಕೇಶ್ವರ : ಕಳೆದ ಕೆಲವು ತಿಂಗಳುಗಳಿಂದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳು ಮತ್ತೆ ಮುಂದೆವರೆದಿದ್ದು, ರವಿವಾರ ನಡೆದ ಬೆಳವಣಿಗೆಯಲ್ಲಿ ಎ.ಬಿ.ಪಾಟೀಲ ಹಾಗೂ ಕತ್ತಿ ಕುಟುಂಬದ ಸಂಪರ್ಕ ಕೈಬಿಟ್ಟ ಕಾರಖಾನೆ ನಿರ್ದೇಶಕರು ಮತ್ತೆ ಅಣ್ಣಾಸಾಹೇಬ ಜೊಲ್ಲೆ ಅವರ ಮನೆ ಕದ ತಟ್ಟಿದ್ದಾರೆ. ಇದರಿಂದ ಕತ್ತಿ ಹಾಗೂ ಎ.ಬಿ.ಪಾಟೀಲ ಅವರಿಗೆ ಹಿರಶುಗರದಲ್ಲಿ ಹಿನ್ನಡೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸದಾ ಸುದ್ದಿಯಲ್ಲಿ ಇರುವ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಕರು ಕಳೆದ 30 ವರ್ಷಗಳಿಂದ ಕತ್ತಿ ಕುಟುಂಬದ ಹಿಡಿತದಲ್ಲಿದ್ದ ಕಾರ್ಖಾನೆಯನ್ನು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ತೆಕ್ಕೆಗೆ ನೀಡಿದ್ದರು.
ಕೆಲವು ದಿನಗಳ ಬಳಿಕ ಮತ್ತೆ ಬಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆ ಅವರನ್ನು ಕಡೆಗಣಿಸಿ ಮಾಜಿ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ಅವರ ಬಳಿ ಹೋಗಿ ಹಿರಣ್ಯಕೇಶಿ ಕಾರಖಾನೆಯನ್ನು ನೀವೆ ಮುನ್ನಡಿಸಿ ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ಕೋರೆ ಅವರು ಸರಿಯಾಗಿ ಪ್ರತ್ಯುತ್ತರ ನೀಡದ ಹಿನ್ನೆಲೆಯಲ್ಲಿ ಮತ್ತೆ ವಾಪಸಾಗಿದ್ದರು. ಅದರ ಬಳಿಕ ಮೊನ್ನೆ ಸಂಕೇಶ್ವರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರಿಬ್ಬರು ಒಂದಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಹಿರಣ್ಯಕೇಶಿ ಕಾರಖಾನೆಯನ್ನು ಕತ್ತಿ ಕುಟುಂಬಕ್ಕೆ ಹಾಗೂ ಎ.ಬಿ.ಪಾಟೀಲ ಅವರ ಜೊತೆ ಸೇರಿ ಮುನ್ನಡೆಸುವ ತೀರ್ಮಾನ ಮಾಡಿದ್ದರು. ಆದರೆ ಹಿರಣ್ಯಕೇಶಿ ಸಕ್ಕರೆ ಕಾರಖಾನೆಯನ್ನು ಮುನ್ನಡೆಸುವಲ್ಲಿ ಎ.ಬಿ.ಪಾಟೀಲ ಹಾಗೂ ಕತ್ತಿ ಅವರು ಹಿನ್ನಡೆ ಉಂಟಾಗಿದ್ದು, ದುಡ್ಡು ಸಂಗ್ರಹ ಮಾಡುವಲ್ಲಿ ಹಿನ್ನಡೆ ಮಾಡಿದ್ದಾರೆಂಬ ಕಾರಣ ತಾವು ಮತ್ತೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಹೋಗಿರುವದಾಗಿ ನಿರ್ದೇಶಕರು ತಿಳಿಸಿದ್ದಾರೆ. ಈ ಬಗ್ಗೆ ರವಿವಾರ ಮಧ್ಯಾಹ್ನ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಭಿವಂಶಿ ಗ್ರಾಮದಲ್ಲಿರುವ ಜೊಲ್ಲೆ ಫಾರ್ಮ ಹೌಸನಲ್ಲಿ ಭೇಟಿ ಮಾಡಿದ ಹಿರಾಶುಗರ ನಿರ್ದೇಶಕರು ಚರ್ಚೆ ನಡೆಸಿ ಬಾಲಚಂದ್ರ ಜಾರಕಿಹೊಳಿ ಹಾಗೂ ಜೊಲ್ಲೆ ಅವರ ಮುಂದಾಳತ್ವದಲ್ಲಿ ಕಾರಖಾನೆ ಮುನ್ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.