ಡಿ.12ರಂದು ಮುಂಡಗೋಡ ಟಿಬೆಟಿಯನ್ ಕ್ಯಾಂಪ್ಗೆ ದಲೈಲಾಮಾ ಆಗಮನ ಹಿನ್ನೆಲೆ: ಪೂರ್ವ ಸಿದ್ಧತಾ ಸಭೆ
ಮುಂಡಗೋಡ 09: ಟಿಬೆಟಿಯನ್ನರ ಪರಮೋಚ್ಚ ಧಾರ್ಮಿಕ ನಾಯಕ ದಲೈಲಾಮಾ ಅವರು ಡಿ.12ರಂದು ತಾಲೂಕಿನ ಟಿಬೆಟಿಯನ್ ಕ್ಯಾಂಪ್ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಭೇಟಿಯನ್ನು ಸುಗಮ ಮತ್ತು ಸುರಕ್ಷಿತವಾಗಿ ನೆರವೇರಿಸಲು ಕೈಗೊಳ್ಳಬೇಕಾದ ಸಿದ್ಧತೆಗಳು ಮತ್ತು ಭದ್ರತಾ ವ್ಯವಸ್ಥೆಗಳ ಕುರಿತು ಸೋಮವಾರದಂದು ಮಹತ್ವದ ಸಭೆ ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಖಕ) ದೀಲೀಪ್ ಎಂ.ಎನ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ದಲೈಲಾಮಾ ಅವರ ಭೇಟಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳು, ಸಾರಿಗೆ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರೆ ಅಗತ್ಯ ವ್ಯವಸ್ಥೆಗಳು ಕ್ಯಾಂಪ್ ನಂ.3ರ ಡೊಗುಲಿಂಗ್ ಸೆಟ್ಲಮೆಂಟ್ ಕಚೇರಿಯ ಸಭಾಂಗಣದಲ್ಲಿ ಸಭೆ ಜರುಗಿತು.
ಸಭೆಯಲ್ಲಿ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಯಾವುದೇ ಲೋಪದೋಷಗಳಿಲ್ಲದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವರಿಷ್ಠಾಧಿಕಾರಿ (ಖಕ) ದೀಲೀಪ್ ಎಂ.ಎನ್ ಸೂಚನೆ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ಕ್ಯಾಂಪ್ ಮಾರ್ಗದಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗುವುದು. ಎಲ್ಲ ಕಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ವಾಹನಗಳ ಓಡಾಟಕ್ಕೆ ಪಾಸ್ ನೀಡಲಾಗುವುದು. ಪಾಸ್ ಇದ್ದವರು ಮಾತ್ರ ನಿಗದಿತ ಪ್ರದೇಶದಲ್ಲಿ ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಿರಸಿ ಎಸಿ ಕಾವ್ಯಾರಾಣಿ ಕೆ.ವಿ. ತಹಶೀಲ್ದಾರ್ ಶಂಕರ ಗೌಡಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಟಿಬೆಟಿಯನ್ ಸೆಟ್ಲಮೆಂಟ್ನ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.