“ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ”
“ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ”
ಶಿರಹಟ್ಟಿ 14: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ದತ್ತು ಗ್ರಾಮವಾದ ಶಿರಹಟ್ಟಿ ತಾಲೂಕಿನ ಸುಹನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಡಾ. ಬಸವರಾಜ ನಾವಿ ಇವರ ಹೊಲದಲ್ಲಿ ಏರಿ್ಡಸಲಾಗಿತ್ತು. ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ 2024-25 ನೇ ಸಾಲಿನ ತಡ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಇಂಜಿನಿಯರಿಂಗ್ ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್ ಇವರು ಮಾತನಾಡಿ, ಬೆಂಡೆಕಾಯಿ ಬೆಳೆಯಲ್ಲಿ ಅಧಿಕ ಹಾಗೂ ಗುಣಮಟ್ಟದ ಬೆಂಡೆಕಾಯಿ ಉತ್ಪಾದಕತೆಗಾಗಿ ಅರ್ಕಾ ನಿಖಿತಾ ಎಂಬ ಹೊಸ ಸಂಕರಣ ತಳಿಯನ್ನು ಪ್ರಾತ್ಯಕ್ಷಿಕೆ ಕೈಗೊಂಡ ತಾಕುಗಳಲ್ಲಿ ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೆವಿಕೆ ತೋಟಗಾರಿಕೆ ತಜ್ಞರಾದ ಹೇಮಾವತಿ ಹಿರೇಗೌಡರ ಇವರು ಅರ್ಕಾ ನಿಖಿತಾ ಒಂದು ಜೈವಿಕ ಬಲವರ್ಧಿತ ಸಂಕರಣ ತಳಿಯಾಗಿದ್ದು ಬೇಗನೆ ಹೂವು ಬಿಟ್ಟು ಕಾಯಿಗಳನ್ನು ಕಟ್ಟುತ್ತದೆ. 125-130 ದಿನಗಳಲ್ಲಿ ಪ್ರತಿ ಎಕರೆಗೆ 8-9 ಟನ್ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದ್ದು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನಿಂದ ಬಿಡುಗಡೆಯಾಗಿದೆ ಎಂದು ತಿಳಿಸುತ್ತ ಬೆಂಡೆಕಾಯಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಂತ್ರಜ್ಞಾನಗಳ ಕುರಿತು ವಿವರಿಸಿದರು. ಡಾ. ಬಸವರಾಜ ನಾವಿ ಇವರು ತಮ್ಮ ಹೊಲದಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಿದ ವಿವಿಧ ಸಾವಯವ ಪರಿಕರಗಳ ಕುರಿತು ವಿವರಿಸಿದರು ಹಾಗೂ ಅರ್ಕಾ ನಿಖಿತ ಉತ್ತಮ ಇಳುವರಿ ಕೊಡುವುದರ ಜೊತೆಗೆ ರೋಗಗಳ ಬಾಧೆ ಕಡಿಮೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಕ್ಷೇತ್ರೋತ್ಸವದಲ್ಲಿ ವಿವಿಧ ಗ್ರಾಮದ ಯುವಕರು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು. ಸಮಾರಂಭದ ಪೂರ್ವದಲ್ಲಿ ಬೆಂಡೆಕಾಯಿ ಬೆಳೆಯ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರ ಭೆಟ್ಟಿಯನ್ನು ಏರಿ್ಡಸಲಾಗಿತ್ತು.