ರಾಣೆಬೆನ್ನೂರ

“ಮಹಿಳೆಯು ಒತ್ತಡದಲ್ಲಿಯೂ ತನ್ನ ಆರೋಗ್ಯ ನಿರ್ಲಕ್ಷಿಸಬಾರದು”: ಡಾ. ಜ್ಯೋತಿ ಶಿವಪ್ರಕಾಶ್ ತಂಡಿ:

“ಮಹಿಳೆಯು ಒತ್ತಡದಲ್ಲಿಯೂ ತನ್ನ ಆರೋಗ್ಯ ನಿರ್ಲಕ್ಷಿಸಬಾರದು”: ಡಾ. ಜ್ಯೋತಿ ಶಿವಪ್ರಕಾಶ್ ತಂಡಿ:

 ರಾಣೆಬೆನ್ನೂರು  02:  ಭಾರತೀಯ ಸಮಾಜದಲ್ಲಿ ವೇದ ಇತಿಹಾಸ ಕಾಲಗಳಿಂದಲೂ, ಮಹಿಳೆಯು ತಾಯಿಗೆ ಮಗಳಾಗಿ ಮೊಮ್ಮಗಳಿಗೆ ಅಜ್ಜಿಯಾಗಿ, ಅಣ್ಣ- ತಮ್ಮನಿಗೆ  ಅಕ್ಕ ತಂಗಿಯಾಗಿ ಪತಿಗೆ ಪತ್ನಿಯಾಗಿ ಕುಟುಂಬದಲ್ಲಿ ಗ್ರಹಿಣಿಯಾಗಿ  ವಿವಿಧ ರೂಪದಲ್ಲಿ ಗುರುತಿಸಿಕೊಂಡು ಸಮಗ್ರ ಕುಟುಂಬದ ನಿರ್ವಹಣೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಸಮರ್ಥ ನಾಯಕಿಯಾಗಿದ್ದಾಳೆ. ಎಷ್ಟೇ ಒತ್ತಡಗಳಿದ್ದರೂ, ನಿರ್ಲಕ್ಷ ವಹಿಸದೇ, ಮುಖ್ಯವಾಗಿ ತನ್ನ ಆರೋಗ್ಯದ ಕಡೆ ಗಮನಹರಿಸಬೇಕಾದ ಇಂದಿನ ಅಗತ್ಯವಿದೆ ಎಂದು ನಗರದ ಖ್ಯಾತ ವೈದ್ಯ ಡಾ. ಜ್ಯೋತಿ ಶಿವಪ್ರಕಾಶ್ ತಂಡಿ  ಹೇಳಿದರು. ಅವರು ಇಲ್ಲಿನ ಮಾರುತಿ ನಗರದ ಶ್ರೀರಾಮ ದೇವಸ್ಥಾನ ಸಬಾಂಗಣದಲ್ಲಿ ಆರೋಗ್ಯ ಭಾರತಿ ಕರ್ನಾಟಕ ಆಯೋಜಿಸಿದ್ದ, ( ರಕ್ತ ಹೀನತೆ ಮತ್ತು ನಿವಾರಣಾ ವಿಧಾನ )ಮಹಿಳಾ ಆರೋಗ್ಯ ಜಾಗೃತಿ  ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು. ಗಂಡ, ಮಕ್ಕಳು, ಮನೆ ಮತ್ತು ಕುಟುಂಬ ಇವುಗಳ ನಿರ್ವಹಣೆಯಲ್ಲಿ ತನ್ನ ಆರೋಗ್ಯದ ಕಡೆ ಗಮನಹರಿಸದೆ ಇರುವುದು ಮತ್ತು ನಿರ್ಲಕ್ಷ ವಹಿಸುವುದು ಸರಿಯಲ್ಲ. 

 ಕೆಲಸ ಕಾರ್ಯಗಳ ಒತ್ತಡದ ಮಧ್ಯೆಯು ಆರೋಗ್ಯ ಸಂಬಂಧಿತ ಏನೇ ಸಮಸ್ಯೆಗಳಿದ್ದರೂ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಬೇಕು ಇದರಿಂದಾಗಿ ಮುಂದೆ ಆಗಬಹುದಾದ ಬಹುದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು ಎನ್ನುವುದನ್ನು ಪ್ರತಿಯೊಬ್ಬರು  ಅರ್ಥಮಾಡಿಕೊಳ್ಳಬೇಕು ಎಂದು ಮಹಿಳಾ ಸಮುದಾಯಕ್ಕೆ ಅವರು ಕರೆ ನೀಡಿದರು.  ಧನ್ವಂತರಿ ಭಾವಚಿತ್ರಕ್ಕೆ ಜ್ಯೋತಿ ಪ್ರಜ್ವಲನಗೊಳಿಸಿ ಆರೋಗ್ಯ ಜಾಗೃತಿ ಚಾಲನೆ ನೀಡಿದ ಜಿಲ್ಲಾ ಕೋಶಾಧ್ಯಕ್ಷ ವೆಂಕಟರಂಗಂ ಅವರು, ಸಮಾಜದಲ್ಲಿ ಆರೋಗ್ಯ ಜೀವನ ಬಹು ಮುಖ್ಯ. ಆರೋಗ್ಯ ಹದಗೆಟ್ಟರೆ ಇಡೀ ಕುಟುಂಬವೇ ಚಿಂತನೆಗಿಡಾಗ ಬೇಕಾಗುತ್ತದೆ ಇಂತಹ ಶಿಬಿರಗಳ ಮೂಲಕ  ಬಹು ಮುಖ್ಯವಾಗಿ ರಕ್ತ ಹೀನತೆಯಿಂದ ಆಗುವ ಪರಿಣಾಮ  ಕುರಿತು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು.  

ಆರೋಗ್ಯ ಭಾರತಿ ಹಾವೇರಿ  ಜಿಲ್ಲಾಧ್ಯಕ್ಷರಾದ, ಹಿರಿಯ ವೈದ್ಯ ಡಾ. ಶಿವಪ್ರಕಾಶ್ ತಂಡಿ ಅವರು, ಪರಿಪೂರ್ಣ ಆರೋಗ್ಯ ರಕ್ಷಣೆಗೆ ದಿನ ನಿತ್ಯದ ಬದುಕಿನಲ್ಲಿ ಮುಖ್ಯವಾಗಿ  ಅನುಸರಿಸಬೇಕಾದ ಕ್ರಮ ಕುರಿತು ಮಾರ್ಗದರ್ಶನ ನೀಡಿದರು. ತಾಲೂಕ ಅಧ್ಯಕ್ಷ ಸಂದೀಪ್ ಕುರ್ಡೇಕರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ,   ಗೀತಾ ಮಂಟೂರ, ಮಹಿಳೆ ಕುಟುಂಬದ ಕಣ್ಣು. ಉತ್ತಮ ಆರೋಗ್ಯದಿಂದ ಸುರಕ್ಷಿತ  ಕುಟುಂಬ ನಿರ್ಮಾಣ ಸಾಧ್ಯವಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಆರೋಗ್ಯ ಪ್ರಮುಖರಾದ  ಮಂಜುಳಾ ಹರಿಹರ ಅವರು, ಆರೋಗ್ಯ ಭಾರತಿ ಮಹಿಳೆಯರ ಆರೋಗ್ಯ ರಕ್ಷಣೆ ಸುರಕ್ಷತೆ, ವಿಶೇಷವಾಗಿ ರಕ್ತ ಹೀನತೆ ಜಾಗೃತಿ ಹಿನ್ನೆಲೆಯಲ್ಲಿ ವರ್ಷದುದ್ದಕ್ಕೂ ಜಿಲ್ಲೆಯಾದ್ಯಂತ ತನ್ನ ಸೇವೆ ಸಲ್ಲಿಸುತ್ತದೆ.

ಮಹಿಳೆಯರ ಆರೋಗ್ಯ ರಕ್ಷಣೆಯೇ "ಆರೋಗ್ಯ ಭಾರತಿ" ಧ್ಯೇಯ ವಾಕ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ, ರಾಜೇಶ್ವರಿ ಉದಗಟ್ಟಿ, ಉಪಾಧ್ಯಕ್ಷ ವೀರೇಶ್ ಬಣಕಾರ್, ಕಾರ್ಯದರ್ಶಿಗಳಾದ ಹೆಚ್‌. ಹೆಚ್‌. ದ್ಯಾವಣ್ಣನವರ, ಮೃತುಂಜಯ ಗುಳೇರ ಮತ್ತು ವಿವಿಧ ವಿಭಾಗಗಳ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರೋಗ್ಯ ಭಾರತಿ ಕರ್ನಾಟಕ ಸಂಸ್ಥೆಗೆ ಇಪ್ಪತ್ತಕ್ಕೂ ಹೆಚ್ಚು ಸದಸ್ಯರು ಸೇರೆ​‍್ಡಗೊಂಡರು. ಮುಂಜಾನೆಯಿಂದ ಸಂಜೆವರೆಗೂ ನಡೆದ  ಆರೋಗ್ಯ ಜಾಗೃತಿ ಶಿಬಿರದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ,ಮಾಹಿತಿ ಮತ್ತು ಮಾರ್ಗದರ್ಶನ ಪಡೆದರು.,ಪಾರ್ವತಿ ಹುಲಿಹಳ್ಳಿ ಪ್ರಾರ್ಥಿಸಿದರು. ಯೋಗ ಗುರು ಪಾಂಡಪ್ಪ ಪೂಜಾರ, ಶಾಂತಿ ಮಂತ್ರ ಘೋಷಿಸಿದರು. ಪರಶುರಾಮ ಛಲವಾದಿ, ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ರುದ್ರಗೌಡ  ಪಾಟೀಲ್ ನಿರೂಪಿಸಿ, ಮಹೇಶ್ವರಿ ಕುಬಸದ ವಂದಿಸಿದರು. 


ಸುದ್ದಿ ಓದಿ