“ಲಡಾಖ್‌ನಲ್ಲಿ ಉಕ್ರೇನ್‌ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್‌ನಲ್ಲಿ ಹೇಳಿಕೆ
ಲಂಡನ್: ಮೇ 21 : ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಐಡಿಯಾಸ್ ಆಫ್ ಇಂಡಿಯಾ ಸೆಮಿನಾರ್‌ನಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಡಾಖ್ ಮತ್ತು ಡೋಕ್ಲಾಮ್‌ನಲ್ಲಿ ಚೀನಾ ಉಕ್ರೇನ್‌ನಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಆದರೆ ಸರ್ಕಾರ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ವಿಷಯದ ಬಗ್ಗೆ ಮಾತನಾಡಲು ಸರ್ಕಾರಕ್ಕೆ ಭಯವಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಧ್ರುವೀಕರಣಕ್ಕಾಗಿ ಬಿಜೆಪಿ ದೇಶದಲ್ಲಿ ಸೀಮೆಎಣ್ಣೆ ಎರಚುತ್ತಿದೆ. ಒಂದು ಕಿಡಿ ಸಾಕು, ದೇಶವೇ ಹೊತ್ತಿ ಉರಿಯುತ್ತದೆ. ಇದನ್ನು ಮೊದಲು ನಿಲ್ಲಿಸಲಿ ಎಂಬುದು ಕಾಂಗ್ರೆಸ್ ಸೇರಿದಂತೆ ಇಡೀ ವಿಪಕ್ಷಗಳ ಹೋರಾಟ ಎಂದರು.
ಕಾಂಗ್ರೆಸ್‌ಗೆ ಸತತ ಸೋಲು?
ಕಾಂಗ್ರೆಸ್ ಸೋಲು ಮತ್ತು ಬಿಜೆಪಿಯ ಗೆಲುವಿಗೆ ಕಾರಣ ಎಂಬ ಪ್ರಶ್ನೆಗೆ, “ನಾವು ಜನರ ಬಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಹೇಳಿದರು. ಬಿಜೆಪಿಗೆ ಮತ ಹಾಕದ 60-70% ಜನರ ಬಳಿ ಹೋಗಬೇಕಾಗಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಾಗಿ ಹೋಗಬೇಕಾಗಿದೆ ಎಂದರು.
ಆಂತರಿಕ ಭಿನ್ನಾಭಿಪ್ರಾಯ :
ಪ್ರಸ್ತುತ ಕಾಂಗ್ರೆಸ್ ಆಂತರಿಕ ಭಿನ್ನಾಭಿಪ್ರಾಯ ಎದುರಿಸುತ್ತಿದ್ದು, ಅದರ ವಿರುದ್ಧ ಹೋರಾಡುತ್ತಿದೆ ಎಂದು ರಾಹುಲ್ ಗಾಂಧಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಿಮಗೇಕೆ ಬಿಜೆಪಿಯಂತಹ ಕಾರ್ಯಕರ್ತರು ಇಲ್ಲ ಎಂಬ ಪ್ರಶ್ನೆಗೆ ರಾಹುಲ್, ಅವರಂತಹ ಕೇಡರ್ ಇದ್ದರೆ ನಾವು ಜನರ ಮಾತು ಕೇಳುವುದನ್ನು ನಿಲ್ಲಿಸುತ್ತೇವೆ ಎಂಬುದು ನನ್ನ ಉತ್ತರ. ಇದು ಕಾಂಗ್ರೆಸ್‌ನ ಡಿಎನ್‌ಎಯಲ್ಲಿಲ್ಲ.
ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು :
ಭಾರತದಲ್ಲಿನ ಸರ್ಕಾರವು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಗಂಭೀರವಾಗಿಲ್ಲ. 1991ರ ನೀತಿಗಳೊಂದಿಗೆ ಈಗಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಸಾಧ್ಯವಿಲ್ಲ. “ನಾನು 2012 ರಲ್ಲಿ ಮನಮೋಹನ್ ಸಿಂಗ್ ಜಿ ಅವರನ್ನು ಕೇಳಿದ್ದೆ, ಹಳೆಯ ನೀತಿಗಳು ಕಾರ್ಯನಿರ್ವಹಿಸುವುದಿಲ್ಲ. ಈಗ ನಾವು ಹೊಸ ಯುಗವನ್ನು ಪ್ರವೇಶಿಸಿದ್ದೇವೆ ಎಂಬುದು ಅವರ ಉತ್ತರವಾಗಿತ್ತು. ಬಿಕ್ಕಟ್ಟು ಎದುರಿಸಲು ಸರ್ಕಾರ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ದೂರಿದರು.
ಭಾರತದ ಮಾನಹಾನಿಗೆ ಯತ್ನ:
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ನ ಯೋಜನೆಗಳನ್ನು ಸೀಮೆಎಣ್ಣೆ ಎರಚುವ ಮೂಲಕ ನಾಶಪಡಿಸಲಾಗಿದೆ. ರಾಹುಲ್ ವಿದೇಶಕ್ಕೆ ಹೋಗಿ ಭಾರತದ ಮಾನಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.