ರಾಷ್ಟ್ರೀಯ

ನಲಸೋಪಾರಾ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಮಹಿಳೆ ಸಾವು, 25 ಮಂದಿ ರಕ್ಷಣೆ

ನಲಸೋಪಾರಾ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ಮಹಿಳೆ ಸಾವು, 25 ಮಂದಿ ರಕ್ಷಣೆ
ಮುಂಬೈ, ಅ. 14 : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿರುವ ವಸತಿ ಬಹುಮಹಡಿ ಕಟ್ಟಡದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯೊಬ್ಬರು ಮೃತಪಟ್ಟಿದ್ದು, 25 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಇಂಪೀರಿಯಲ್ ಹೈಟ್ಸ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಎಂಟನೇ ಮಹಡಿಯಿಂದ ಹತ್ತನೇ ಮಹಡಿಯವರೆಗೆ ಬೆಂಕಿ ವ್ಯಾಪಿಸಿದೆ ಎಂದು ವರದಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ವಸಾಯಿ-ವಿರಾರ್ ನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ತುರ್ತು ಸೇವಾ ತಂಡಗಳು 25 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಕಟ್ಟಡದ ಇತರ ಹಲವು ನಿವಾಸಿಗಳು ತಾವಾಗಿಯೇ ಹೊರಬಂದಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತ ಪೃಥ್ವಿರಾಜ್ ಬಿ. ಪಿ. ತಿಳಿಸಿದ್ದಾರೆ.

ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯ ಗುರುತು ಹಾಗೂ ಸಾವಿನ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.

ಸುದ್ದಿ ಓದಿ