ಅಫ್ಘಾನಿಸ್ತಾನದ ಆರೋಗ್ಯ ಪರಿಸ್ಥಿತಿ ಡಬ್ಲ್ಯು ಎಚ್ ಓ ಕಳವಳ
ಕಾಬೂಲ್, ಆಗಸ್ಟ್ 19 : ಹಿಂಸಾಗ್ರಸ್ಥ ಅಫ್ಘಾನಿಸ್ತಾನದಲ್ಲಿನ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ತಾಲಿಬಾನಿಗಳ ಆಗಮನದೊಂದಿಗೆ ಹಿಂಸಾಚಾರಗಳು ತೀವ್ರಗೊಂಡಿರುವ ಕಾರಣ 14,000ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
ಕಳೆದ ವರ್ಷ 4,057 ಗಾಯಾಳುಗಳ ಪ್ರಕರಣಗಳು ವರದಿಯಾಗಿದ್ದವು, ಈಗ ತಾಲಿಬಾನ್ ದಾಳಿಗಳಿಂದ ಗಾಯಗೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು WHO ಹೇಳಿದ್ದು, ಅಫ್ಘನ್ ಭದ್ರತಾ ಪಡೆಗಳು,ನಾಗರಿಕರ ಮೇಲೆ ದಾಳಿ ನಡೆಸಿದ್ದರಿಂದ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದೆ.
ಗಾಯಾಳುಗಳಿಗೆ ವೈದ್ಯಕೀಯ ಸೇವೆ ಕಲ್ಪಿಸುವ ಮಾನವೀಯ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಪೂರ್ವ ಮೆಡಿಟರೇನಿಯನ್‌ನ WHO ಪ್ರಾದೇಶಿಕ ನಿರ್ದೇಶಕ ಡಾ. ಅಹ್ಮದ್ ಅಲ್-ಮಂದಾರಿ ಮನವಿ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ವೈದ್ಯಕೀಯ ಸಾಮಗ್ರಿಗಳ ಕೊರತೆ ಎದುರಿಸುತ್ತಿರುವ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರ ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ ಎಂದು ಹೇಳಿದಾರೆ. ಡಬ್ಲ್ಯುಎಚ್‌ಓ ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಆಸ್ಪತ್ರೆಗೆ 10,000 ಗಾಯಾಳುಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದೆ ಎಂದು ಡಾ ಅಲ್ ಮಂದಾರಿ ಹೇಳಿದ್ದಾರೆ.