ಭಾರತ, ಪಾಕಿಸ್ತಾನ ಸಹವರ್ತಿಗಳೊಂದಿಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಚರ್ಚೆ
ವಾಷಿಂಗ್ಟನ್, ಆಗಸ್ಟ್ 17 : ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಕುರಿತಂತೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್, ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಜೆ ಬ್ಲಿಂಕನ್ ಮಾತುಕತೆ ನಡೆಸಿ, ಅಫ್ಘಾನಿಸ್ತಾನ ಹಾಗೂ ಅಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಈ ವಿಷಯ ಕುರಿತಂತೆ ಬ್ಲಿಂಕನ್ ಮಾತುಕತೆ ನಡೆಸಿದರು ಎಂದು ಪ್ರೈಸ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಬ್ಲಿಂಕನ್, ರಷ್ಯಾ, ಚೈನಾ ಸಹವರ್ತಿಗಳೊಂದಿಗೆ ಅಫ್ಘಾನಿಸ್ತಾನ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ದರು.
ತಾಲಿಬಾನ್ ಭಾನುವಾರ ಕಾಬೂಲ್ ಪ್ರವೇಶಿಸುವ ಮೂಲಕ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿದೆ. ಅಧ್ಯಕ್ಷ ಅಶ್ರಫ್ ಘನಿ ರಾಜೀನಾಮೆ ನೀಡಿ, ದೇಶ ತೊರೆದಿದ್ದು, ರಕ್ತಪಾತ ತಡೆಯುವ ಭಾಗವಾಗಿ ದೇಶತೊರೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಹಲವು ರಾಷ್ಟ್ರಗಳು ಭದ್ರತಾ ಪರಿಸ್ಥಿತಿ ಹಿನ್ನಲೆಯಲ್ಲಿ ತನ್ನ ನಾಗರೀಕರು ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಗೊಳಿಸಿದ್ದಾರೆ
ವಿಮಾನ ನಿಲ್ದಾಣದಲ್ಲಿ ಉಂಟಾದ ಕಂಡು ಕೇಳರಿಯದ ಪ್ರಯಾಣಿಕರ ದಟ್ಟಣಿ ಹಾಗೂ ನೂಕುನಗ್ಗಲಿನಿಂದ ಉಂಟಾದ ಘಟನೆಗಳಲ್ಲಿ ಭಾನುವಾರದಿಂದ ಕನಿಷ್ಟ ಏಳು ಮಂದಿ ಅಫ್ಘಾನಿಸ್ತಾನ ನಾಗರೀಕರು ಮೃತಪಟ್ಟಿದ್ದಾರೆ.