ಅಟ್ಲಾಂಟಾದಲ್ಲಿ ಮೂರು ಪ್ರತ್ಯೇಕ ಸ್ಪಾಗಳ ಮೇಲೆ ಗುಂಡಿನ ದಾಳಿ: ಎಂಟು ಮಂದಿ ಸಾವು
ಅಟ್ಲಾಂಟಾ, ಮಾರ್ಚ್ 17:ಇಲ್ಲಿನ ಸ್ಪಾಗಳ ಮೇಲೆ ನಡೆದ ಮೂರು ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ನತದೃಷ್ಟ ಮಹಿಳೆಯರು ಏಷ್ಯನ್ನರು ಎಂದು ತಿಳಿದುಬಂದಿದೆ. ಜಾರ್ಜಿಯಾದ ಅಕ್ವರ್ತ್‌ನಲ್ಲಿ ಸ್ಪಾದಲ್ಲಿ ಇಬ್ಬರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ವೆಲ್‌ಸ್ಟಾರ್ ಕೆನ್ನೆಸ್ಟೋನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಚೆರೋಕೀ ಕೌಂಟಿ ಷರೀಫ್ ಅವರ ವಕ್ತಾರ ಜೇ ಬೇಕರ್ ಹೇಳಿದ್ದಾರೆ.ಅಕ್ವರ್ತ್ ಗುಂಡಿನ ದಾಳಿಗೆ ಸಂಬಂಧಿಸಿ ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಘಟನೆಯಲ್ಲಿ ಇಲ್ಲಿನ ಪೀಡ್‌ಮಾಂಟ್ ರಸ್ತೆಯಲ್ಲಿರುವ ಗೋಲ್ಡ್ ಮಸಾಜ್ ಸ್ಪಾದಲ್ಲಿ ದರೋಡೆಗೆ ಯತ್ನಿಸಿರುವ ಬಂಧೂಕುದಾರಿಗಳು ಗುಂಡಿನ ಹಾರಿಸಿದ್ದು, ಈ ವೇಳೆ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೂರನೇ ಘಟನೆಯಲ್ಲಿ ಅರೋಮಾ ಥೆರಪಿ ಸ್ಪಾ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ಮೂರು ದಾಳಿಗಳಿಗೆ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.