ಸೋಷಿಯಲ್ ಮೀಡಿಯಾಗೆ ಟ್ರಂಪ್ ರಿ ಎಂಟ್ರಿ….!
ವಾಷಿಂಗ್ಟನ್, ಮಾ 22: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಮರು ಪ್ರವೇಶಿಸಲಿದ್ದಾರಂತೆ. ಆದರೆ, ಟ್ವಿಟರ್ , ಫೇಸ್‌ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅವರ ಖಾತೆಗಳನ್ನು ನಿಷೇಧಿಸಿದ್ದಾರಲ್ಲವೇ...? ಮತ್ತೆ ಅವರು ಸಾಮಾಜಿಕ ಮಾಧ್ಯಮ ಹೇಗೆ ಪ್ರವೇಶಿಸಲಿದ್ದಾರೆ ಎಂಬುದು ನಿಮ್ಮ ಅನುಮಾನ. ಆದರೆ, ಈ ಬಾರಿ ಟ್ರಂಪ್ ಅವರು ತಮ್ಮನ್ನು ನಿಷೇಧಿಸಿದ ಸೋಷಿಯಲ್ ಮೀಡಿಯಾ ವೇದಿಕೆಗಳ ಬದಲು ತಮ್ಮದೇ ಆದ ಮತ್ತೊಂದು ಹೊಸ ಸಾಮಾಜಿಕ ಮಾಧ್ಯಮ ವೇದಿಕೆ ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಎರಡು ಅಥವಾ ಮೂರು ತಿಂಗಳಲ್ಲಿ ಹೊಸ ಸೋಷಿಯಲ್ ಮೀಡಿಯಾ ವೇದಿಕೆ ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅವರ ಹಿರಿಯ ಸಲಹೆಗಾರರೊಬ್ಬರು ಇಂಗ್ಲಿಷ್ ಮಾಧ್ಯಮಯೊಂದಕ್ಕೆ ತಿಳಿಸಿದ್ದಾರೆ. ಹೊಸ ವೇದಿಕೆಯ ಮೂಲಕ ಟ್ರಂಪ್ ಮತ್ತೆ ನೇಟಿಜನ್ ಗಳ ಮುಂದೆ ಬರಲಿದ್ದಾರೆ ಎಂದು 2020 ರ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ವಕ್ತಾರರಾಗಿದ್ದ ಜೇಸನ್ ಮಿಲ್ಲರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಟ್ರಂಪ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹೆಜ್ಜೆ ಇರಿಸಲಿದ್ದಾರೆ. ಈ ಬಾರಿ ಅವರು ತಮ್ಮದೇ ಆದ ಹೊಸ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರಿಗೆ ಲಭ್ಯವಾಗಲಿದ್ದಾರೆ ಎಂದು ಹೇಳಿರುವ ಮಿಲ್ಲರ್, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ಮತ್ತೊಂದೆಡೆ, ಟ್ರಂಪ್ ಅಧಿಕಾರಿ ವರ್ಗಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಅಮೆರಿಕದಲ್ಲಿ ಜನವರಿ 6 ರಂದು ಕ್ಯಾಪಿಟಲ್ ಭವನದ ಮೇಲೆ ಟ್ರಂಪ್ ಬೆಂಬಲಿಗರು ದಾಳಿಯಲ್ಲಿ ಭಾಗಿಯಾಗಿದ್ದು, ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತು. ಆದರೆ, ದಾಳಿಯ ನಂತರದ ಪರಿಣಾಮವಾಗಿ ಟ್ರಂಪ್ ಅವರನ್ನು ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಇತರ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಂದ ನಿಷೇಧ ಹೇರಲಾಗಿತ್ತು.