ಅಮೆರಿಕಾದಲ್ಲಿ 4 ಲಕ್ಷ ದಾಟಿದ ಕೊರೊನಾ ಸಾವುಗಳು
ನ್ಯೂಯಾರ್ಕ್, ಜ 25: ಅಮೆರಿಕಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 2.5 ಕೋಟಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 4 ಲಕ್ಷ ದಾಟಿದ್ದು, ವಿಶ್ವದ ಯಾವ ದೇಶದಲ್ಲೂ ಈ ಪ್ರಮಾಣದ ಸೋಂಕು, ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದೆ.ಪ್ರಪಂಚದಾದ್ಯಂತ ವರದಿಯಾಗುತ್ತಿರುವ ಪ್ರತಿ ನಾಲ್ಕು ಪ್ರಕರಣಗಳಲ್ಲಿ ಒಂದು ಪ್ರಕರಣ ಅಮೆರಿಕಾದಲ್ಲಿ ವರದಿಯಾಗುತ್ತಿದೆ. ಪ್ರತಿ ಐದು ಸಾವುಗಳಲ್ಲಿ ಒಂದು ಸಾವು ಅಮೆರಿಕಾದಲ್ಲಿ ಸಂಭವಿಸಿದೆ. ಆದರೆ, ಕಳೆದ ವಾರದಲ್ಲಿ ದಿನಿತ್ಯದ ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಸಾಂಕ್ರಾಮಿಕ ರೋಗಗಳ ಸಂಖ್ಯೆ ಜನವರಿ ಆರಂಭದಲ್ಲಿ ದಿನಕ್ಕೆ ಸರಾಸರಿ 2 ಲಕ್ಷಗಳಿತ್ತು. ಆದರೆ ಆ ಸಂಖ್ಯೆ ಈಗ 1.76 ಲಕ್ಷಕ್ಕೆ ಇಳಿದಿದೆ.
ಇತ್ತೀಚೆಗೆ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋ ಬೈಡನ್, ಸಾಂಕ್ರಾಮಿಕ ರೋಗ ತಡೆಗೆ ರಾಷ್ಟ್ರೀಯ ಯೋಜನೆ ಬಿಡುಗಡೆ ಸೇರಿದಂತೆ ಹತ್ತು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿದ್ದಾರೆ.ಮುಂದಿನ 100 ದಿನಗಳಲ್ಲಿ ಅಮೆರಿಕದಾದ್ಯಂತ 10 ಕೋಟಿ ಮಂದಿಗೆ ಲಸಿಕೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ನಿಯಂತ್ರಿಸದಿದ್ದರೆ ಕೆಲವೇ ದಿನಗಳಲ್ಲಿ ಸೋಮಕಿನಿಂದ ಸಾವಿನ ಸಂಖ್ಯೆ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಬೈಡೆನ್ ಎಚ್ಚರಿಸಿದ್ದಾರೆ.