ಟ್ರಂಪ್ ತೀರ್ಮಾನ ತಿರಸ್ಕರಿಸಿದ ಬೈಡನ್ ...!
ವಾಷಿಂಗ್ಟನ್, ಜ 19: ಕೊರೊನಾ ಸಾಂಕ್ರಾಮಿಕ ‘ಪ್ರಸರಣ’ ಹಿನ್ನಲೆಯಲ್ಲಿ ಯುರೋಪ್, ಬ್ರೆಜಿಲ್ ದೇಶಗಳ ಪ್ರಯಾಣಿಕರ ಆಗಮನದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜನವರಿ 26ರಿಂದ ರದ್ದುಪಡಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸೋಮವಾರ ಪ್ರಕಟಿಸಿದ್ದರು, ಆದರೆ, ಆವರ ನಿರ್ಧಾರವನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಆಡಳಿತ ವರ್ಗ ತಿರಸ್ಕರಿಸಿದೆ. ವೈರಸ್ ಪ್ರಸರಣ ತಡೆಯಲು ಯುರೋಪ್, ಬ್ರೆಜಿಲ್ ದೇಶಗಳ ಪ್ರಯಾಣಿಕರ ಮೇಲಿನ ನಿರ್ಬಂಧ ತೆಗೆದು ಹಾಕುವ ಟ್ರಂಪ್ ನಿರ್ಧಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಕಾರಣಕ್ಕೂ ಈ ನಿಷೇಧವನ್ನು ತೆಗೆದುಹಾಕುವುದಿಲ್ಲ ಎಂದು ಬೈಡೆನ್ ಆಡಳಿತ ಸ್ಪಷ್ಟಪಡಿಸಿದೆ. ನಿಷೇಧವನ್ನು ತೆಗೆದುಹಾಕುವುದಾಗಿ ಟ್ರಂಪ್ ಘೋಷಿಸಿದ ಕೆಲ ಹೊತ್ತಿನಲ್ಲಿ ಬೈಡೆನ್ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ಈ ಪ್ರಮುಖ ಹೇಳಿಕೆ ನೀಡಿದ್ದಾರೆ.
ವೈದ್ಯಕೀಯ ತಜ್ಞರ ಶಿಫಾರಸಿನಂತೆ ನಮ್ಮ ಆಡಳಿತ ಇದೇ 26 ರಿಂದ ನಿರ್ಬಂಧ ತೆಗೆದುಹಾಕುವುದಿಲ್ಲ .. ಹೇಳಬೇಕೆಂದರೆ ಅಂತರರಾಷ್ಟ್ರೀಯ ಪ್ರಯಾಣಿಕರ ವಿಷಯದಲ್ಲಿ ಮತ್ತಷ್ಟು ಜಾಗ್ರತೆ ವಹಿಸಲು ನಾವು ನಿರ್ಧರಿಸಿದ್ದೇವೆ. ಪ್ರಪಂಚದಾದ್ಯಂತ ಕೊರೊನಾ ಪ್ರಸರಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ವಿದೇಶಿ ಪ್ರಯಾಣಿಕರ ಮೇಲಿನ ನಿರ್ಬಂಧಗಳು ‘ವೈರಸ್’ ಹರಡುವಿಕೆ ತಡೆಯಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಪ್ರಮುಖವಾಗಿ ಅಮೆರಿಕಾದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಅದರಲ್ಲೋ ಹೊಸ ರೀತಿಯ ಕೊರೊನಾ ಸೋಂಕು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಿರ್ಬಂಧಗಳನ್ನು ತೆರವು ಗೊಳಿಸುವ ವಿಷಯದಲ್ಲಿ ಅಳೆದು ತೂಗಿ ವ್ಯವಹರಿಸುವ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ ಎಂದು ಜೆನ್ ಸಾಕಿ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಹರಡುವಿಕೆ ತೀವ್ರವಾಗಿರುವುದರಿಂದ ವಿಮಾನ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಪ್ರಮಾಣೀಕರಣ ಕಡ್ಡಾಯಗೊಳಿಸಬೇಕು ಎಂದು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಪ್ರಕಟಿಸಿದ ಕೆಲವೇ ದಿನಗಳಲ್ಲಿ ಟ್ರಂಪ್, ಬೈಡನ್ ಆಡಳಿತ ಈ ನಿರ್ಧಾರ ಪ್ರಕಟಿಸಿರುವುದು ಗಮನಾರ್ಹ. ಇನ್ನೂ ಬುಧವಾರ ಅಮೆರಿಕಾದ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬೈಡೆನ್... ಪ್ರಮುಖವಾಗಿ ಕೊರೊನಾ ಸಾಂಕ್ರಾಮಿಕ ಅಂತ್ಯವಾಡಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಮೊದಲ 100 ದಿನಗಳಲ್ಲಿ 100 ಮಿಲಿಯನ್ ಜನರಿಗೆ ಲಸಿಕೆ ಹಾಕುವುದು, ಹಾಗೆಯೇ 100 ದಿನಗಳವರೆಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಮುಂತಾದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಬೈಡೆನ್ ಈಗಾಗಲೇ ಘೋಷಿಸಿದ್ದಾರೆ.