ಅತ್ಯಾಚಾರದಿಂದ ಗರ್ಭಧರಿಸಿದರೂ.. ಗರ್ಭಪಾತ ಮಾಡಿಸಿಕೊಳ್ಳುವುದು ಅಪರಾಧ.. ಅಮೆರಿಕಾದಲ್ಲಿ ಹೊಸ ಕಾನೂನು…!
ಅರ್ಕಾನ್ಸಾಸ್, ಮಾ 9 : ಅಮೆರಿಕಾದ ಅರ್ಕಾನ್ಸಾಸ್ ರಾಜ್ಯ ಸರ್ಕಾರ ಸಂಚಲನ ನಿರ್ಧಾರ ತೆಗೆದುಕೊಂಡಿದೆ. ಅಮೆರಿಕಾದ ಯಾವುದೇ ರಾಜ್ಯ ಜಾರಿಗೆ ತರಲು ಸಾಧ್ಯವಿಲ್ಲದಂತಹ ಹೊಸ ಗರ್ಭಪಾತ ಕಾಯ್ದೆಯನ್ನು ಇಲ್ಲಿನ ಸರ್ಕಾರ ತರುತ್ತಿದೆ. ಅತ್ಯಾಚಾರ, ವೇಶ್ಯಾವಾಟಿಕೆಯ ಕಾರಣಗಳಿಂದ ಗರ್ಭ ಧರಿಸಿದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುವುದು ಅಪರಾಧ ಎಂದು ಪರಿಗಣಿಸುವ ಹೊಸ ಮಸೂದೆಗೆ ಗರ್ವನರ್ ಅಸ್ಸಾ ಹಚಿನ್ಸನ್ ಮಂಗಳವಾರ ಸಹಿ ಹಾಕಿದ್ದಾರೆ.
ಒಂದೊಮ್ಮೆ ನ್ಯಾಯಾಲಯ ಮಧ್ಯಪ್ರವೇಶಿಸದಿದ್ದರೆ , ಹೊಸ ಕಾನೂನು ಆಗಸ್ಟ್ ನಿಂದ ಜಾರಿಗೆ ಬರಲಿದೆ. ಕಾಯ್ದೆಯ ಪ್ರಕಾರ ಗರ್ಭಪಾತವನ್ನು ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ನಡೆಸಬೇಕು. ಅತ್ಯಾಚಾರ, ವೇಶ್ಯಾವಾಟಿಕೆ ಕಾರಣಗಳಿಂದ ನಡೆಸುವ ಗರ್ಭಪಾತ ಅಪರಾಧವೆಂದು ಪರಿಗಣಿಸಲಾಗುತ್ತದೆ.. ಅಮೆರಿಕದ ಅನೇಕ ರಾಜ್ಯಗಳು ಈಗಾಗಲೇ ಗರ್ಭಪಾತ ಮಸೂದೆಗಳನ್ನು ಅಂಗೀಕರಿಸಿದೆ. ಆದರೆ, ಅತ್ಯಾಚಾರ, ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿಸುವುದಿಲ್ಲ ಎಂದು ಯಾವುದೇ ರಾಜ್ಯ ಹೇಳಿಲ್ಲ. ಇತ್ತೀಚೆಗೆ, ಸೌತ್ ಕೆರೊಲಿನಾ ಇದೇ ರೀತಿಯ ಕಾನೂನು ರೂಪಿಸಿತ್ತು, ಆದರೆ, ಫೆಡರಲ್ ನ್ಯಾಯಾಲಯ ಈ ಕಾನೂನನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಅರ್ಕಾನ್ಸಾಸ್ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಕಾನೂನನ್ನು ನ್ಯಾಯಾಲಯ ರದ್ದುಗೊಳಿಸುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಅತ್ಯಾಚಾರ ಹಾಗೂ ವೇಶ್ಯಾವಾಟಿಕೆ ಪ್ರಕರಣಗಳಿಗೆ ವಿನಾಯಿತಿ ನೀಡಲು ಸಿದ್ಧ ಎಂದು ಅರ್ಕಾನ್ಸಾಸ್ ಗವರ್ನರ್ ಅಸ್ಸ ಹಚಿನ್ಸನ್ ಅವರು ಹೇಳಿದ್ದಾರೆ. ಈ ವಿನಾಯಿತಿ ಕಲ್ಪಿಸಿದರೆ ನ್ಯಾಯಾಲಯ ಕಾನೂನನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.