ಹೊಸ ವರ್ಷ ಮೊದಲ ದಿನ 3.7 ಲಕ್ಷ ಮಕ್ಕಳು ಜನನ.. ಯುನಿಸೆಫ್ ಅಂದಾಜು
ನ್ಯೂಯಾರ್ಕ್, ಜ 1: ಹೊಸ ವರ್ಷ ಜನವರಿ 1 ರಂದು ವಿಶ್ವಾದ್ಯಂತ ಸುಮಾರು 3.7 ಲಕ್ಷ ಮಕ್ಕಳು ಜನಿಸಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಶುಕ್ರವಾರ ತಿಳಿಸಿದೆ. ಯುನಿಸೆಫ್ ಅಂದಾಜಿನ ಪ್ರಕಾರ 2021 ರಲ್ಲಿ ಒಟ್ಟು 14 ಕೋಟಿ ಮಕ್ಕಳು ಜನಿಸಲಿದ್ದು, ಅವರ ಜೀವಿತಾವಧಿ 84 ವರ್ಷಗಳಾಗಲಿವೆ ಎಂದು ಹೊಸದಾಗಿ ಅಂದಾಜಿಸಿದೆ. ಶುಕ್ರವಾರ ಫೆಸಿಫಿಕ್ ನ ಫಿಜಿಯಲ್ಲಿ 2021 ವರ್ಷದ ಮೊದಲ ಮಗು ಜನಿಸಿದೆ ಎಂದು ಯುನಿಸೆಫ್ ತಿಳಿಸಿದೆ. ಪ್ರಪಂಚದಲ್ಲಿಯೇ ಅತ್ಯಧಿಕವಾಗಿ ಭಾರತದಲ್ಲಿ ಜನವರಿ 1ರಂದು 59,995 ಮಂದಿ ಮಕ್ಕಳು ಜನಿಸಲಿದ್ದಾರೆ ಎಂದು ಯುನಿಸೆಫ್ ಹೇಳಿದೆ.
ಚೀನಾದಲ್ಲಿ 35,615 ಮಕ್ಕಳು, ನೈಜೀರಿಯಾದಲ್ಲಿ 21,439, ಪಾಕಿಸ್ತಾನದಲ್ಲಿ 14,161, ಇಂಡೋನೇಷ್ಯಾದಲ್ಲಿ 12,336, ಇಥಿಯೋಪಿಯಾದಲ್ಲಿ 12,006, ಅಮೆರಿಕಾದಲ್ಲಿ 10,312, ಈಜಿಪ್ಟ್ ನಲ್ಲಿ 9,455, ಬಾಂಗ್ಲಾದೇಶದಲ್ಲಿ 9,236 ಹಾಗೂ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 8,640 ಮಕ್ಕಳು ಜನಿಸಲಿದ್ದಾರೆ. ಇಂದು ಜನಿಸಿದ ಮಕ್ಕಳು ಕಳೆದ ವರ್ಷಕ್ಕಿಂತ ವಿಭಿನ್ನ ಜಗತ್ತನ್ನು ಪ್ರವೇಶಿಸಲಿದ್ದಾರೆ ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ಹೇಳಿದ್ದಾರೆ. ನಮ್ಮ ಮಕ್ಕಳಿಗೆ ಸುರಕ್ಷಿತ, ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ ಎಂದು ಹೆನ್ರಿಯೆಟಾ ಕರೆ ನೀಡಿದ್ದಾರೆ. ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಎಂದು ಯುನಿಸೆಫ್ ಇಂಡಿಯಾ ವಕ್ತಾರ ಯಾಸ್ಮಿನ್ ಅಲಿಹಾಕ್ ಹೇಳಿದ್ದಾರೆ.