ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತ: ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಬೆಳಗಾವಿ, ಅ. 11 : ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ದುರ್ಗಾದೇವಿಯ ಮೂರ್ತಿಯನ್ನು ಹೊತ್ತು ಸಾಗುತ್ತಿದ್ದ ಮೆರವಣಿಗೆಗೆ ಟ್ರಕ್‌ವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಭಕ್ತರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿಯಿಂದ ದುರ್ಗಾದೇವಿಯ ಮೂರ್ತಿಯನ್ನು ತಂದು ಹಂಚ್ಯಾನಟ್ಟಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ಭಕ್ತರ ಮೆರವಣಿಗೆಗೆ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ಪ್ಲಾಜಾ ಸಮೀಪ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಕಾಶ್, ಮಹೇಶ್ ಮತ್ತು ದಾನೇಶ್ವರಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಗೆ ಹಾಗೂ ಸಮೀಪದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದು, ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ಇದೇ ತಾಲ್ಲೂಕಿನ ಸಂಕೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಅಪಘಾತದಲ್ಲಿ ರಾಜ್ಯ ಸಾರಿಗೆ ಬಸ್‌ವೊಂದು ಟಿಪ್ಪರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಮೃತಪಟ್ಟಿದ್ದು, 12 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಂಗಾವತಿಯಿಂದ ಬೆಳಗಾವಿ ಮಾರ್ಗವಾಗಿ ಕೊಲ್ಹಾಪುರಕ್ಕೆ ನಿಗದಿತ ಮಾರ್ಗದಲ್ಲಿ ತೆರಳುತ್ತಿದ್ದ ಬಸ್ ಸಂಕೇಶ್ವರ ಸಮೀಪ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಂಕೇಶ್ವರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದ ಈ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.