ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ದಯನೀಯ ; ವಿಶ್ವಸಂಸ್ಥೆ ಕಳವಳ
ಜಿನೀವಾ, ಆಗಸ್ಟ್ 14 : ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪರಿಸ್ಥಿತಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿದೆ. ತಾಲಿಬಾನ್ ಗಳ ಆಕ್ರಮಣದಿಂದ ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಸಂಪೂರ್ಣ ಕುಸಿದಿದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಗಳು ಕೂಡಲೇ ದಾಳಿಗಳನ್ನು ನಿಲ್ಲಿಸಬೇಕು , ಬಲ ಪ್ರಯೋಗ ಸುದೀರ್ಘ ನಾಗರಿಕಯುದ್ದಕ್ಕೆ ಕಾರಣವಾಗಲಿದ್ದು, ದೇಶವನ್ನು ಏಕಾಂಗಿಯಾಗಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
‘
ಅಫ್ಘಾನಿಸ್ತಾನ ನಿಯಂತ್ರಣ ಕಳೆದುಕೊಂಡಿದೆ. ಈಗಾಗಲೇ ಇಂತಹ ಘರ್ಷಣೆಗಳನ್ನು ಅನುಭವಿಸಿದ ದೇಶ ಮತ್ತೊಮ್ಮೆ ಸಂಕೀರ್ಣ ಪರಿಸ್ಥಿತಿಗೆ ಸಿಲುಕಿದೆ. ಇದು ಅಲ್ಲಿನ ಜನರಿಗೆ ಇನ್ನಿಲ್ಲದ ಹತಾಶೆಯ ಸ್ಥಿತಿಯನ್ನು ಮೂಡಿಸಿದೆ. ಅಫ್ಘನ್ ಜನರ ಒಳಿತಿಗಾಗಿ ತಾಲಿಬಾನ್ ಗಳು ಕೂಡಲೇ ತಮ್ಮ ದಾಳಿಗಳನ್ನು ನಿಲ್ಲಿಸಬೇಕಾಗಿದೆ. ವಿಶ್ವಾಸದಿಂದ ಮಾತುಕತೆ ನಡೆಸಬೇಕು. ಬಲ ಪ್ರಯೋಗದಿಂದ ಅಧಿಕಾರ ದಕ್ಕಿಸಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಇದು ದೀರ್ಘಕಾಲದ ನಾಗರೀಕ ಯುದ್ಧಕ್ಕೆ ಕಾರಣವಾಗಿ ದೇಶವನ್ನು ಏಕಾಂಗಿಯಾಗಿಸಲಿದೆ. ಅಧಿಕಾರಕ್ಕಾಗಿ ಯುದ್ದಮಾರ್ಗ ಅನುಸರಿಸುವವರ ವಿರುದ್ದ ಅಂತರರಾಷ್ಟ್ರೀಯ ಸಮುದಾಯ ಸ್ಪಷ್ಟ ಸಂದೇಶ ರವಾನಿಸಬೇಕುಎಂದು ಗುಟರೆಸ್ ಕರೆ ನೀಡಿದ್ದಾರೆ.
ಅಮೆರಿಕಾ ಸೇನೆ ಅಫ್ಗಾನಿಸ್ತಾನದಿಂದ ಹೊರಬೀಳುತ್ತಿದ್ದಂತೆಯೇ ತಾಲಿಬಾನ್ ಗಳು ತಮ್ಮ ಆಟಾಟೋಪ ಪ್ರಾರಂಭಿಸಿದ್ದಾರೆ. ಅತ್ಯಲ್ಪ ಅವಧಿಯಲ್ಲಿ ದೇಶದ ಶೇ 60ಕ್ಕಿಂತಲೂ ಹೆಚ್ಚು ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತೊಂದು ವಾರದಲ್ಲಿ ಇಡೀ ದೇಶವನ್ನು ಕೈವಶಮಾಡಿಕೊಳ್ಳಲಿದ್ದೇವೆ ಎಂದು ಈಗಾಗಲೇ ಘೋಷಿಸಿದ್ದಾರೆ. ಹಾಗೆಯೇ ತಾಲಿಬಾನಿಗಳು ಕಾಬೂಲ್ ಸಮೀಪಿಸಿರುವ ಬಗ್ಗೆ ವರದಿಗಳಿವೆ ಈ ಕ್ರಮವಾಗಿ ಆಕ್ರಮಣಕ್ಕೆ ಗುರಿಯಾದ ಜನರ ಹಕ್ಕುಗಳನ್ನು ಹೊಸಕಿಹಾಕುತ್ತಿವೆ ಎಂಬ ವರದಿಗಳು ಬಂದಿದೆ. ವಿಶೇಷವಾಗಿ ಮಹಿಳೆಯರು, ಬಾಲಕಿಯರ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ ಎಂಬ ವರದಿಗಳಿಗೆ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.