ರೈತರ ಆರ್ಥಿಕ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ

ರೈತರ ಆರ್ಥಿಕ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ The economic development of farmers is the development of the country.

ಸವದತ್ತಿ 30: ರೈತರು ಬೆಳೆದ ಬೆಳೆಗಳು ಸಮೃದ್ಧವಾಗಿ ಬಂದಾಗ ಮಾತ್ರ ನಾಡಿನಲ್ಲಿ ನಿಜವಾದ ಖುಷಿ ಕಾಣಲು ಸಾಧ್ಯ. ರೈತರ ಆರ್ಥಿಕ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿಯಾಗಿದೆ ಎಂದು ಯುವ ಧುರೀಣ ಅಶ್ವಥ್ ವೈದ್ಯ ಅಭಿಪ್ರಾಯಪಟ್ಟರು. ನಗರದ ಟಿಎಪಿಸಿಎಂಎಸ್ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಗುಣಮಟ್ಟದ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವುದು ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳ ಜವಾಬ್ದಾರಿ ಎಂದರು.

ರೈತರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಸದಾ ಬದ್ಧರಿದ್ದೇವೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ,ಮಾತನಾಡಿದ ಅವರು ರೈತರು ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಬಿತ್ತನೆ ಬೀಜಗಳ ಗುಣಮಟ್ಟ ಅತ್ಯಂತ ಮುಖ್ಯ. ಕೆಲವೊಮ್ಮೆ ಕಮಿಷನ್ ಆಮಿಷಕ್ಕಾಗಿ ಕೆಲವು ಕಂಪನಿಗಳು ಕಳಪೆ ಬೀಜಗಳನ್ನು ಉತ್ತಮವೆಂದು ಬಿಂಬಿಸಿ ಮಾರಾಟ ಮಾಡುತ್ತವೆ. ರೈತರು ಇಂತಹ ದಾರಿ ತಪ್ಪಿಸುವ ಮಾರಾಟಗಾರರ ಮಾತುಗಳನ್ನು ನಂಬಿ ಮೋಸ ಹೋಗಬಾರದು ಎಂದು ಎಚ್ಚರಿಸಿದರು.

ಬೀಜಗಳನ್ನು ಖರೀದಿಸುವಾಗ ಆತುರಪಡದೆ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದ ಅವರು, ಯಾವುದೇ ಅನುಮಾನ ಅಥವಾ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಕೃಷಿ ಇಲಾಖೆ ಅಥವಾ ತಹಶೀಲ್ದಾರ್ ಕಚೇರಿಯ ಗಮನಕ್ಕೆ ತರಬೇಕು. ಇಂತಹ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಕೃಷಿ ಇಲಾಖೆ ಅಧಿಕಾರಿ ಶಿವಪ್ರಕಾಶ್ ಪಾಟೀಲ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಯೂರಿಯಾ ರಸಗೊಬ್ಬರವನ್ನು ಯೂರಿಯಾ ಡಿಸ್ಟ್ರಿಬ್ಯೂಷನ್ ಆ್ಯಪ್‌’ ಮುಖಾಂತರ ವಿತರಿಸಲಾಗುತ್ತಿದೆ. ರೈತರ ಗುರುತಿನ ಸಂಖ್ಯೆ  ಆಧಾರದ ಮೇಲೆ, ಪ್ರತಿ ಎಕರೆಗೆ ಒಂದು ಚೀಲದಂತೆ ರಸಗೊಬ್ಬರ ನೀಡಲಾಗುವುದು.

ಎಫ್‌.ಐ.ಡಿ. ಹೊಂದಿರದ ರೈತರು ಕೂಡಲೇ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು. ಮಣ್ಣಿನ ಫಲವತ್ತತೆ ಕಾಪಾಡಲು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ವರದಿಯ ಆಧಾರದ ಮೇಲೆ ರಸಗೊಬ್ಬರ ಬಳಸಿ. ಅವಸರದಲ್ಲಿ ಬಿತ್ತನೆ ಮಾಡದೆ, ಮಣ್ಣಿನಲ್ಲಿ ತೇವಾಂಶ ಗಮನಿಸಿ ಸೂಕ್ತ ಹದವಿದ್ದರೆ ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳಿ. ಮಣ್ಣು ಮತ್ತು ಪರಿಸರದ ಆರೋಗ್ಯಕ್ಕಾಗಿ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಿ.

ಸವದತ್ತಿ ತಾಲೂಕಿನ ವಿವಿಧ ಬೀಜ ವಿತರಣಾ ಕೇಂದ್ರಗಳಲ್ಲಿ ಹೆಸರು, ಉದ್ದು ಮತ್ತು ಗೋವಿನಜೋಳದ ಬೀಜಗಳನ್ನು ಸರ್ಕಾರದ ಸಹಾಯಧನದೊಂದಿಗೆ ವಿತರಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಭರಮಪ್ಪ ಅಣಿಗೇರಿ, ಅಲೀಸಾಬ ನೂಲಗಿ, ಶಿವಕುಮಾರ್ ರಾಠೂಡ್, ರಾಜೇಶ ಅಂಗಡಿ, ಲಕ್ಷ್ಮಣ ಬಾಲರೆಡ್ಡಿ,ಗೀರೀಶ್ ಮುನವಳ್ಳಿ,ಹಾಗೂ ಸ್ಥಳೀಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.