ತೈವಾನ್ ತಳಮಳ: ಸೆಮಿಕಂಡಕ್ಟರ್ ದ್ವೀಪ ಸುತ್ತುವರಿದ ಡ್ರ್ಯಾಗನ್! ಅಮೆರಿಕದ ವಿರುದ್ಧ ಪಾಕ್ ಹೇಳಿಕೆ!!
ತೈಪೆ/ತೈವಾನ್: ಆಗಸ್ಟ್ 03 :ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ್ದನ್ನೇ ಜಗತ್ತಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಇನ್ನೊಂದು ಯುದ್ಧಕ್ಕೆ ವಿಶ್ವ ಸನ್ನದ್ಧವಾಗುತ್ತಿದೆಯೇ ಅನ್ನೋ ವಿಚಾರ ಜಗತ್ತಿನ ಜನರನ್ನು ಚಿಂತೆಗೆ ದೂಡಿದೆ. ಯುಎಸ್ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ರಾತ್ರಿ ತೈವಾನ್‌ಗೆ ಆಗಮಿಸುತ್ತಿದ್ದಂತೆ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಅಮೆರಿಕದ ವಿರುದ್ಧ ಡ್ರ್ಯಾಗನ್ ರಾಷ್ಟ್ರ ಕೆಂಡಕಾರುತ್ತಿದೆ. ತೈವಾನ್ ಮೇಲಿನ ತನ್ನ ಸಿಟ್ಟನ್ನು ಹಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ತೀರಿಸಿಕೊಳ್ಳಲು ಚೀನಾ ಆರಂಭಿಸಿದೆ. ಇಷ್ಟು ಮಾತ್ರವಲ್ಲದೆ ತೈವಾನ್ ನ ನೈಋತ್ಯ ಭಾಗದಲ್ಲಿ 21 ಸೇನಾ ವಿಮಾನಗಳನ್ನು ಹಾರಿಸುವ ಮೂಲಕ ಚೀನಾ ಸೇನೆ ತನ್ನ ಶಕ್ತಿ ಪ್ರದರ್ಶಿಸಿದೆ. ಚೀನಾದ ಮಿಲಿಟರಿ ಪಿಎಲ್‌ಎ, ತೈವಾನ್ ಸುತ್ತಲೂ ಫೈರ್ ಡ್ರಿಲ್‌ಗಳನ್ನು ಆರಂಭಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕ್ಸಿನ್ಹುವಾ ಸುದ್ದಿಸಂಸ್ಥೆ, ತೈವಾನ್ ಸುತ್ತಲೂ ಮಿಲಿಟರಿ ಕಾರ್ಯಾಚರಣೆಗಳನ್ನು ಚೀನಾ ನಡೆಸುತ್ತಿದೆ ಎಂದು ವರದಿ ಮಾಡಿದೆ. ಇನ್ನೊಂದೆಡೆ ಹೇಳಿಕೆ ನೀಡಿರುವ ಚೀನಾ, ‘ಒನ್ ಚೀನಾ ನೀತಿ’ಯನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದೆ.