ನೀತಿ ಉಲ್ಲಂಘನೆ ಹಿನ್ನೆಲೆ: ಟ್ರಂಪ್ ಯೂಟ್ಯೂಬ್ ಖಾತೆ ತಾತ್ಕಾಲಿಕ ಸ್ಥಗಿತ
ವಾಷಿಂಗ್ಟನ್, ಜ 13 : ನೀತಿ ಉಲ್ಲಂಘನೆ ಹಿನ್ನೆಲೆಯಲ್ಲಿ ತನ್ನ ವಾಹಿನಿಗೆ ಅಪ್‌ಲೋಡ್ ಮಾಡಿದ್ದ ವೀಡಿಯೊವನ್ನು ತೆಗೆದುಹಾಕಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಯೂಟ್ಯೂಬ್ ಕನಿಷ್ಠ ಒಂದು ವಾರ ಸ್ಥಗಿತಗೊಳಿಸಿದೆ. ’ಸದ್ಯ ನಡೆಯುತ್ತಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ಎಲ್ಲವನ್ನೂ ಪರಿಶೀಲಿಸಿ ಸಂಸ್ಥೆಯ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್‌ರ ಚಾನಲ್‌ಗೆ ಅಪ್‌ಲೋಡ್ ಮಾಡಿದ ಹೊಸ ವಿಡಿಯೋವನ್ನು ತೆಗೆದುಹಾಕಿದ್ದೇವೆ.
ಏಳು ದಿನಗಳ ಕಾಲ ಖಾತೆ ಸ್ಥಗಿತಗೊಳಿಸಲಾಗಿದೆ ಎಂದು ಯೂಟ್ಯೂಬ್ ಪ್ರಕಟಣೆಯಲ್ಲಿ ತಿಳಿಸಿದೆ.ಹಿಂಸಾಚಾರದ ಹಿನ್ನೆಲೆಯಲ್ಲಿ ಆತಂಕಗಳನ್ನು ಗಮನದಲ್ಲಟ್ಟುಕೊಂಡು ಸಂಸ್ಥೆ ಅಧ್ಯಕ್ಷ ಟ್ರಂಪ್ ಅವರ ಚಾನೆಲ್‌ನಲ್ಲಿನ ಕಾಮೆಂಟ್‌ಗಳನ್ನು ಅನಿರ್ದಿಷ್ಟವಾಗಿ ನಿಷ್ಕ್ರಿಯಗೊಳಿಸುತ್ತಿದೆ ಎಂದು ಯೂಟ್ಯೂಬ್ ಹೇಳಿದೆ. ಕಳೆದ ಶುಕ್ರವಾರ ಟ್ವಿಟರ್ ಡೊನಾಲ್ಡ್ ಟ್ರಂಪ್ ಅವರನ್ನು ಶಾಶ್ವತವಾಗಿ ನಿಷೇಧಿಸಿದ ನಂತರ ಯೂಟ್ಯೂಬ್ ಈ ಕ್ರಮ ತೆಗೆದುಕೊಂಡಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಇತರ ವೇದಿಕೆಗಳಲ್ಲಿನ ಟ್ರಂಪ್ ಅವರ ಖಾತೆಗಳನ್ನು ಅನಿರ್ದಿಷ್ಟವಾಗಿ ಅಥವಾ ಶಾಶ್ವತವಾಗಿ ನಿರ್ಬಂಧಿಸಲಾಗಿದೆ.