ಮೂಡಲಗಿ

ಪಂಚಮಸಾಲಿ ಸಮಾಜದವರ ಹೋರಾಟಕ್ಕೆ ಬೆಂಬಲ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿಕೆ ಸೋಜಿಗ

ಪಂಚಮಸಾಲಿ ಸಮಾಜದವರ ಹೋರಾಟಕ್ಕೆ ಬೆಂಬಲ  ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿಕೆ ಸೋಜಿಗ

ಮೂಡಲಗಿ 07: ಕರ್ನಾಟಕ  ಲಿಂಗಾಯತ ಪಂಚಮಸಾಲಿ ಸಮಾಜದ ಬಂಧು, ಭಗಿನಿಯರು ಕಳೆದ ಹಲವಾರು ವರ್ಷಗಳಿಂದ ರಾಜ್ಯ ಮೀಸಲಾತಿ ವ್ಯವಸ್ಥೆಯಲ್ಲಿ ಪ್ರವರ್ಗ-2ಎ ಅಡಿ ಶೈಕ್ಷಣಿಕ ಮತ್ತು ಉದ್ಯೋಗ  ಮೀಸಲಾತಿಗಾಗಿ ಆಂದೋಲನ ಹಮ್ಮಿಕೊಂಡಿದ್ದಾರೆ. ಈ ಸಮಾಜದ  ಲಕ್ಷಾಂತರ ಜನ ಸೇರಿ ವಿಧಾನಸೌಧ ಛಲೋ ಮತ್ತು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಮುಂತಾದ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಳುವ ಬಿಜೆಪಿ ಸರಕಾರದ ಮೇಲೆ ಸಾಕಷ್ಟು ಒತ್ತಡ ತರಲಾಗಿದೆ. ಈಗ ಪಂಚಮಸಾಲಿ ಕೂಡಲಸಂಗಮ ಪೀಠದ ಜಗದ್ಗುರು ಬಸವಮೃತ್ಯುಂಜಯ ಸ್ವಾಮಿಜಿಗಳು ಬೆಂಗಳೂರಿನಲ್ಲಿ ಬೃಹತ್ ಸಮ್ಮೇಳನ ಆಯೋಜಿಸಿದ್ದು, ಆ ನಿಮಿತ್ತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ಸಮಾಜದ ಜನರಲ್ಲಿ ಜಾಗೃತಿ ಉಂಟು ಮಾಡುತ್ತಿದ್ದಾರೆ. ಈ ಭಾಗವಾಗಿ ಸದ್ಯ ಅರಭಾವಿ ಮತಕ್ಷೇತ್ರದಾದ್ಯಂತ ಪಂಚಮಸಾಲಿ ಸಮಾಜ ಬಾಹುಳ್ಯವಿರುವ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಅ.7ರಂದು ಕಲ್ಲೊಳ್ಳಿಯಲ್ಲಿ ಬೃಹತ್ ಸಮ್ಮೇಳನ ಹಮ್ಮಿಕೊಂಡಿದ್ದು ಪ್ರಜಾತಂತ್ರದ ಅನುಗುಣವಾಗಿದೆ.

ಆದರೆ, ಈಗ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಇದ್ದಕ್ಕಿದ್ದಂತೆ ಎಚ್ಚತ್ತುಕೊಂಡು ಪಂಚಮಸಾಲಿ ಸಮಾಜದವರ ಹೋರಾಟವನ್ನು ಬೆಂಬಲಿಸುವದಾಗಿ ಹೇಳಿಕೆ ನೀಡಿರುವದು ಸೋಜಿಗವಾಗಿದೆ! ಸದರಿ ಹೋರಾಟ ಪ್ರಾರಂಭವಾಗಿ ವರುಷಗಳೇ ಕಳೆದರೂ ತುಟಿ, ಪಿಟಕ್ಕೆನ್ನದ ಇವರು ಈಗ ಸಹಾನುಭೂತಿ ವ್ಯಕ್ತಪಡಿಸುತ್ತಿರುವದು ರಾಜಕೀಯ ವಲಯದಲ್ಲಿ ಅಚ್ಚರಿ ಉಂಟು ಮಾಡಿದೆ. ಶಾಸಕರಾದವರು ಮೀಸಲಾತಿಯಂತಹ ಗಂಭೀರ ವಿಷಯಗಳ ಕುರಿತು ಶಾಸನಸಭೆ ಯಲ್ಲಿ ತಮ್ಮ ಅಭಿಪ್ರಾಯ ಮತ್ತು ವಿಚಾರಗಳನ್ನು ವ್ಯಕ್ತಪಡಿಸಬೇಕು. ಅರಭಾವಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಬಾಲಚಂದ್ರರ ವೈಯಕ್ತಿಕ ಬೆಂಬಲಿಗರೇ ಆಗಿದ್ದಾರೆ. ಅವರ ಬೆಂಬಲದಿಂದಲೇ 2004ರಿಂದ ಸತತವಾಗಿ ಅರಭಾವಿ ಶಾಸಕರಾಗಿ ಆಯ್ಕೆಯಾಗುತ್ತ ಬಂದಿರುವ ಇವರು ಅವರ ಋಣ ತೀರಿಸಲು ಒಮ್ಮೆಯಾದರೂ ಶಾಸನಸಭೆಯಲ್ಲಿ ಮಾತನಾಡಬೇಕಾಗಿತ್ತು. ಹಾಗೆ ಮಾಡದೇ ಈಗ ಬೀದಿ ಪತ್ರಿಕಾ ಹೇಳಿಕೆಗಳನ್ನು ಕೊಡುತ್ತಿರುವದು ನೋಡಿದರೆ ಮತ್ತೊಂದು ಚುನಾವಣೆ ಸಮೀಪಿಸುತ್ತಿರುವದು ಮನದಟ್ಟಾಗುತ್ತದೆ.

ಪಂಚಮಸಾಲಿಗಳ ಜೊತೆ ಜೊತೆಗೇನೇ ಕರ್ನಾಟಕದ ಕುರುಬರು ಮತ್ತು ಅಂಬಿಗರೂ ಪರಿಶಿಷ್ಟ ಪಂಗಡ ಮೀಸಲಾತಿಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ರಾಜ್ಯದ  ಪರಿಶಿಷ್ಟ ಜಾತಿಗಳ ಪೈಕಿ ಎಡಗೈ ಕೋಮಿನವರು ಒಳಪಂಗಡ ಮೀಸಲಾತಿಗಾಗಿ ದಶಕಗಳಿಂದಲೇ ಶ್ರಮಿಸುತ್ತಿದ್ದಾರೆ. ಈ ಮೂರೂ ಪಂಗಡಗಳ ಜನರು ಅರಭಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಬಾಲಚಂದ್ರರು ಅವರಿಂದ ರಾಜಕೀಯವಾಗಿ ಉಪಕೃತರಾಗಿದ್ದಾರೆ. ಈ ಪೈಕಿ ಕುರುಬರು ಪ್ರವರ್ಗ- 2ಎ ನಲ್ಲಿದ್ದಾರೆ. ಇವರು ಪಂಚಮಸಾಲಿ ಜನರನ್ನು ತಮ್ಮ ಗುಂಪಿಗೆ ಸೇರಿಸುವ ಮುಂಚೆಯೇ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಧಾವಂತದಲ್ಲಿದ್ದಾರೆ. ಆದರೆ, ಈ ಕುರಿತು ಸದರಿ ಶಾಸಕರು ಒಮ್ಮೆಯೂ ಮಾತನಾಡುವ ಗೋಜಿಗೆ ಹೋಗಿಲ್ಲ. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಿದರೆ ತಮ್ಮ ಜೊತೆ ಪಾಲುದಾರರಾಗುತ್ತಾರೇನೋ ಎಂಬ ಹಿಂಜರಿಕೆಯೂ ಇದ್ದೀತು!

ಇಂತಹ ಗಂಭೀರ, ಸೂಕ್ಷ್ಮ ಮತ್ತು ನೈಜ ಬೇಡಿಕೆಗಳ ಕುರಿತು ಶಾಸನಸಭೆಯಲ್ಲಿ ಮಾತನಾಡದೇ ಕೇವಲ ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲ ವ್ಯಕ್ತಪಡಿಸುವದು ಅವರ ಗೋಸುಂಬೆ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಅದೂ ಚುನಾವಣೆಗೆ ಕೇವಲ ಆರು ತಿಂಗಳುಗಳು ಮಾತ್ರ ಬಾಕಿಯಿರುವಾಗ ಇಂತಹ ಹೇಳಿಕೆ ಅವರ ಅವಕಾಶವಾದಿ ರಾಜಕಾರಣವಾಗಿದೆ. ಸರಕಾರಗಳನ್ನು ಉರುಳಿಸುವ ಶಕ್ತಿಯಿರುವ ಜಾರಕಿಹೊಳಿ ಸಹೋದರರು ತಮ್ಮ ರಾಜಕೀಯ ಶಕ್ತಿಯನ್ನು ತಮಗೆ ಆ ಶಕ್ತಿ ಕೊಟ್ಟ ಪಂಚಮಸಾಲಿಗಳು, ಕುರುಬರು, ಅಂಬಿಗರು ಮತ್ತು ಪರಿಶಿಷ್ಟರ ಒಳಿತಿಗಾಗಿ ಏಕೆ ಬಳಸಿಕೊಳ್ಳಬಾರದು? ಈ ಜನಾಂಗಗಳ ಬೇಡಿಕೆ ಈಡೇರಿಸಿ, ಇಲ್ಲವೇ ಸರಕಾರ ಬೀಳಿಸುತ್ತೇವೆ ಎಂದು ಒಮ್ಮೆ ಹೂಂಕರಿಸಲಿ ನೋಡೋಣ? ಈ ಮೂಲಕವಾದರೂ ಅವರು ತಮ್ಮ ಋಣಾತ್ಮಕ ಚಹರೆಯನ್ನು ಕಳಚಿ, ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯಬಹುದು 

ಸುದ್ದಿ ಓದಿ