ಯಶಸ್ವಿ ಚಂದ್ರಯಾನ- ನೆಹರು ನೆಟ್ಟ ಮರ ಫಲ ನೀಡಿದೆ: ಅರವಿಂದ ದಳವಾಯಿ
ಮೂಡಲಗಿ 24: ಬುಧವಾರ ಸಾಯಂಕಾಲ ಚಂದ್ರಯಾನ-3 ಅಭಿಯಾನವನ್ನು ಯಶಸ್ವಿಯಾಗಿಸುವ ಮೂಲಕ ಇಸ್ರೋ ವಿಜ್ಞಾನಿಗಳು ಭಾರತದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಹಾರುವಂತೆ ಮಾಡಿದ್ದು ಯಶಸ್ಸಿಗೆ ಕಾರಣರಾದ ಎಲ್ಲ ವಿಜ್ಞಾನಿಗಳನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಈ ಸಂದರ್ಭದಲ್ಲಿ ಇಡೀ ದೇಶ ತನ್ನ ಅಂತರ್ಗತ ಮತ-ಭೇದಗಳನ್ನು ಮರೆತು ತಮ್ಮದೇ ಕುಟುಂಬದ ಸಾಧನೆ ಎಂಬಂತೆ ವಿಜ್ರಂಭಿಸಿದ್ದು ಅಮೋಘವಾಗಿತ್ತು. ಈ ಸಾಧನೆ ಮತ್ತು ಸಂತಸಕ್ಕೆ ಇಸ್ರೋ ಅಧ್ಯಕ್ಷ ಸೋಮನಾಥ ಮತ್ತು ತಂಡದವರ ಅವಿರತ ಶ್ರಮ ಮತ್ತು ಶ್ರದ್ಧೆಯೇ ಕಾರಣ ಎಂದು ಇಡೀ ದೇಶವೇ ಕೊಂಡಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದ್ದಾರೆ .
ಆದರೆ, ಈ ಅಭೂತಪೂರ್ವ ಸಂದರ್ಭದಲ್ಲಿ ನಾವು ಅಂತರಿಕ್ಷ ಸಂಶೋಧನೆ ಮತ್ತು ಸಾಧನೆಗೆ ಅಡಿಪಾಯ ಹಾಕಿದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು, ಅಂತರಿಕ್ಷ ವಿಜ್ಞಾನಿ ವಿಕ್ರಂ ಸಾರಾಭಾಯಿ ಮತ್ತು ಪರಮಾಣು ಭೌತ ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ ಅವರನ್ನು ಸ್ಮರಿಸಿಕೊಳ್ಳಲೇಬೇಕು. ಪಾಶ್ಚಾತ್ಯ ಶಿಕ್ಷಣ ಹೊಂದಿದ್ದ ನೆಹರು ವಿಜ್ಞಾನ ಮತ್ತು ತಂತ್ರಜ್ಞಾನದ ಸಮರ್ಕ ಬಳಕೆಯಿಂದ ಮಾತ್ರ ಆಧುನಿಕ ಭಾರತ ಕಟ್ಟಲು ಸಾಧ್ಯವೆಂದು ನಂಬಿದ್ದರು. ಹೀಗಾಗಿ, ಅವರು ತಮ್ಮ ಆಡಳಿತದ ಪ್ರಾರಂಭದಲ್ಲಿಯೇ ವಿಕ್ರಂ ಸಾರಾಭಾಯಿ ಮತ್ತು ಹೋಮಿ ಜಹಾಂಗೀರ್ ಭಾಭಾ ಅಂತಹ ಯುವ ವಿಜ್ಞಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರು. 1962 ರಲ್ಲಿಯೇ ಸಾರಾಭಾಯಿ ಅಧ್ಯಕ್ಷತೆಯಲ್ಲಿ ‘ಇಂಡಿಯನ್ ನ್ಯಾಷನಲ್ ಕಮೀಟಿ ಫಾರ್ ಸ್ಪೇಸ್ ರಿಸರ್ಚ್' (ಋಜಚಿಟಿ ಓಚಿಣಠಚಿಟ ಅಠಟಣಣಜಜ ಜಿಠ ಖಠಿಚಿಛಿಜ ಖಜಚಿಡಿಛಿ) ಸ್ಥಾಪಿಸಿದರು. ದೇಶದ ಪ್ರತಿಷ್ಠಿತ ಸಂಶೋಧನೆ ಸಂಸ್ಥೆಗಳ ವಿಜ್ಞಾನಿಗಳು ಇಲ್ಲಿ ಸಹ ಸದಸ್ಯರಾಗಿದ್ದರು. ಪ್ರಾರಂಭದಲ್ಲಿ ಪರಮಾಣು ಶಕ್ತಿ ಆಯೋಗದಡಿ ಕಾರ್ಯ ನಿರ್ವಹಿಸುತ್ತಿದ್ದ ಈ ಸಂಸ್ಥೆ 1969 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಮುತುವರ್ಜಿಯಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧೀನದಲ್ಲಿ 'ಇಸ್ರೋ' ಆಗಿ ರೂಪಾಂತರಗೊಂಡು ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
1975 ರಷ್ಟು ಹಿಂದೆಯೇ ಇಸ್ರೋ ಆರ್ಯಭಟ ಉಪಗ್ರಹ ಹಾರಿಸಿದ್ದು ನಂತರ ಆರ್.ಎಸ್-1, ಎಸ್. ಎಲ್.ವಿ, ಎ.ಎಸ್.ಎಲ್.ವಿ. ಶ್ರೇಣಿಯ ಹಲವಾರು ಉಪಗ್ರಹಗಳನ್ನು ಹಾರಿಬಿಟ್ಟಿದ್ದು ಈಗ ಮಂಗಳ ಮತ್ತು ಚಂದ್ರನನ್ನೂ ತಲುಪಲು ಸಾಧ್ಯವಾಗಿದ್ದರೆ ಅದು ಆರು ದಶಕಗಳ ಹಿಂದೆ ನೆಹರು ನೆಟ್ಟ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ದೂರದರ್ಶಿತ್ವದ ಮರ ಈಗ ಫಲ ನೀಡಲು ಪ್ರಾರಂಭಿಸಿದೆ ಎಂದೇ ಹೇಳಬೇಕು. ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳ ಜೊತೆ ಇಸ್ರೋ ಪಿತಾಮಹರಾದ ನೆಹರು, ಹೋಮಿ ಭಾಭಾ ಮತ್ತು ಸಾರಾಭಾಯಿ ಅವರನ್ನೂ ಕ್ರತಜ್ಞತೆಯಿಂದ ನೆನೆಯೋಣ ಎಂದರು.