ಮೂಡಲಗಿ

ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕೂಟ ; ಶಾಲಾ ಶಿಕ್ಷಕರ ಕಾರ್ಯ ಶ್ಲಾಘನೀಯ: ಅಜೀತ ಮನ್ನಿಕೇರಿ

ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕೂಟ ; ಶಾಲಾ ಶಿಕ್ಷಕರ ಕಾರ್ಯ ಶ್ಲಾಘನೀಯ: ಅಜೀತ ಮನ್ನಿಕೇರಿ

ಲೋಕದರ್ಶನ ವರದಿ 


ಮೂಡಲಗಿ  09: ಸರಕಾರಿ ಶಾಲಾ ಮಕ್ಕಳಿಗೆ ಏರಿ​‍್ಡಸಲಾದ ವಿಶೇಷ ಭೋಜನ ಕೂಟ, ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಪರ ಇರುವ ಪ್ರೀತಿ, ಕಾಳಜಿ ತೋರಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಬಣ್ಣಿಸಿದರು. 

    ಮಂಗಳವಾರ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆಂದೇ ಹಮ್ಮಿಕೊಳ್ಳಲಾಗಿದ್ದ ಮಧ್ಯಾನ್ಹದ ವಿಶೇಷ ಭೋಜನ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಬಗೆ ಬಗೆಯ ಸ್ವಾದಿಷ್ಟ ಭೋಜನ ಉಣಬಡಿಸುತ್ತಿರುವ ಶಾಲಾ ಶಿಕ್ಷಕರ ಕಾರ್ಯವನ್ನು ಶ್ಲಾಘಿಸುತ್ತ ಮಹಿಳಾ ಶಿಕ್ಷಕರಿಗೆ ಮಹಿಳಾ ದಿನಾಚರಣೆಯ ಶುಭ ಹಾರೈಸಿದರು. 

     ನಂತರ ಮುಖ್ಯ ಶಿಕ್ಷಕ ಸುರೇಶ್ ಕೋಪರ್ಡೆಯವರು ಮಾತನಾಡಿ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ, ಪ್ರತಿ ತಿಂಗಳು ಒಂದೆರಡು ಬಾರಿ ಈ ರೀತಿ ವಿಶೇಷ ಭೋಜನ ಕೂಟದ ಆಯೋಜನೆ ಮಾಡುತ್ತ ಬರುತ್ತಿದ್ದೇವೆ, ಇದರಿಂದ ಮಕ್ಕಳ ಹಾಗೂ ಶಿಕ್ಷಕರ ನಡುವಿನ ಬಾಂಧವ್ಯ ಹೆಚ್ಚುವುದರ ಜೊತೆಗೆ ಮಕ್ಕಳಿಗೆ ಸತ್ವಯುತ ಸ್ವಾದಿಷ್ಟ ಭೋಜನ ಸವಿಯಲು ನೆರವಾಗುತ್ತದೆ. ಶಿಕ್ಷಕರೇ ಸ್ವಯಂ ಪ್ರೇರಿತರಾಗಿ ಕೈಗೊಳ್ಳುತ್ತಿರುವ ಈ ಕಾರ್ಯಕ್ಕೆ ಯಾರಾದರೂ ದಾನಿಗಳು ಮುಂದೆ ಬಂದರೆ ಸ್ವಾಗತ ಎಂದರು. 

 ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಹಾಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಲಾ ಕೊಠಡಿಗಳಗೆ ಹಾಳಾಗಿದ್ದ ಹಂಚುಗಳನ್ನು ತೆರವು ಮಾಡಿ ಹೊಸ ಸೂರು ಕಲ್ಪಿಸಿಕೊಟ್ಟಿದ್ದನ್ನು ಸ್ಮರಿಸಿದ ಅವರು ಉಳಿದಿರುವ ಇನ್ನೆರಡು ಕೊಠಡಿಗಳ ದುರಸ್ತಿ ಕಾರ್ಯ ಆದಷ್ಟು ಬೇಗ ಆದರೆ ಮುಂದೆ ಬರಲಿರುವ ಮಳೆಗಾಲ ಅನ್ನುವಷ್ಟರಲ್ಲಿ ಶಾಲಾ ಮಕ್ಕಳಿಗೆ ಓದಲು ತುಂಬಾ ಅನುಕೂಲವಾಗುತ್ತದೆ ಎಂದು ವಿನಂತಿಸಿದರು. 

ಇಸಿಓ ಬಸವರಾಜ ಟಿ, ನಿವೃತ್ತ ಶಿಕ್ಷಕ ಬಿ.ಆರ್‌.ತರಕಾರ, ಸಿ.ಆರ್‌.ಪಿ ಎಸ್‌.ಏನ್‌.ಡಬಾಡಿ, ಎಸ್‌.ವಿ.ಸೋಮವ್ವಗೋಳ, ಶಾಲಾ ಶಿಕ್ಷಕರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ