ದಕ್ಷಿಣ ಆಫ್ರಿಕಾ ಗಲಭೆ: ಭಾರತೀಯ ಸಮುದಾಯದ ರಕ್ಷಣೆಗೆ ಸ್ಟಾಲಿನ್ ಒತ್ತಾಯ
ಚೆನ್ನೈ, ಜುಲೈ17: - ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಗಲಭೆಗಳ ಹಿನ್ನೆಲೆಯಲ್ಲಿ ತಮಿಳುನಾಡಿನ ಜನರು ಸೇರಿದಂತೆ ಭಾರತೀಯ ಸಮುದಾಯದ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಒತ್ತಾಯಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ನಡೆದ ಗಲಭೆಗಳಿಂದ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಆತಂಕಕ್ಕೀಡಾಗಿದ್ದಾರೆ ಎಂದು ಜೈಶಂಕರ್ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ತಮಿಳು ಜನರು ಸೇರಿದಂತೆ ಭಾರತೀಯ ಸಮುದಾಯದವರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಉದ್ವಿಗ್ನತೆ ಮತ್ತಷ್ಟು ತೀವ್ರಗೊಳ್ಳುವ ಆತಂಕದಲ್ಲಿ ಅವರಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಇದು ಗಂಭೀರ ವಿಷಯವಾಗಿದ್ದು, ಶಾಂತಿ ಮತ್ತು ಸಾಮರಸ್ಯ ಮರುಸ್ಥಾಪನೆಗೆ ಮತ್ತೊಮ್ಮೆ ಈ ವಿಷಯವನ್ನು ದಕ್ಷಿಣ ಆಫ್ರಿಕಾದೊಂದಿಗೆ ಚರ್ಚಿಸಲು ಮನವಿ ಮಾಡುತ್ತಿದ್ದೇನೆ.’ ಎಂದು ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.