ಮೂಡಲಗಿ

ಸಿದ್ಧರಾಮೋತ್ಸವವಲ್ಲ ಸಿದ್ಧರಾಮಯ್ಯ ಅಮೃತ ಮಹೋತ್ಸವ: ದಳವಾಯಿ

ಸಿದ್ಧರಾಮೋತ್ಸವವಲ್ಲ ಸಿದ್ಧರಾಮಯ್ಯ ಅಮೃತ ಮಹೋತ್ಸವ: ದಳವಾಯಿ

ಮೂಡಲಗಿ 18: ಸಿದ್ಧರಾಮಯ್ಯ ಅಮೃತ ಮಹೋತ್ಸವವೇ ಹೊರತು ಸಿದ್ಧರಾಮೋತ್ಸವವಲ್ಲ ಎಂದು ಅರವಿಂದ ದಳವಾಯಿ ಹೇಳಿದರು.  

ಅಮೃತ ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಅವರು ಇಂದು ಬೆಳಗಾವಿಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ಕಾರ್ಯಕ್ರಮದ ಕುರಿತು ವಿರೋಧ ಪಕ್ಷಗಳು ಮತ್ತು ಕೆಲ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸಿದ್ಧರಾಮೋತ್ಸವವೆಂದು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಕೆಲವರು ಇದು ರಾಜಕೀಯ ಪಕ್ಷವೊಂದರ ಕಾರ್ಯಕ್ರಮವೆಂದು ಸೀಮಿತಗೊಳಿಸುತ್ತಿದ್ದಾರೆ. ಕೆಲ ಕುಹಕಿಗಳು ಇದು ಕುರುಬರ ಕಾರ್ಯಕ್ರಮವೆಂದು ಬಿಂಬಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಇದು ಸಿದ್ಧರಾಮಯ್ಯನವರು ತಮ್ಮ ಜೀವನದುದ್ದಕ್ಕೂ ಬಾಳಿ, ಬೆಳಗಿದ ಸಿದ್ಧಾಂತಗಳನ್ನು ಜನರೆಲ್ಲರೂ ಸೇರಿ ಪುನರ್‌ಮನನ ಮಾಡಿಕೊಳ್ಳುವ  ಸಂದರ್ಭವೆಂದು ಒತ್ತಿ ಹೇಳಿದರು.  

ಕೋಮು ಮತ್ತು ಜಾತೀಯ ಶಕ್ತಿಗಳು ವಿಜೃಂಭಿಸುತ್ತಿರುವ ಈ ಸಮಯದಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳು ಒಗ್ಗೂಡಬೇಕಾಗಿದೆ. ಈ ಶಕ್ತಿಗಳನ್ನು ಕ್ರೋಢಿಕರಿಸಲು ಈ ಅಮೃತಮಹೋತ್ಸವ ಕಾರ್ಯಕ್ರಮ ಒಂದು ಸುಸಂದರ್ಭವೆಂದು ಅಭಿಪ್ರಾಯ ಪಟ್ಟ ಅವರು ಸಿದ್ಧರಾಮಯನವರು ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಪಾಠದವರಲ್ಲ. ಆದರೆ, ಪಕ್ಷಾತೀತವಾಗಿ ಅವರ ಅಭಿಮಾನಿಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರೇ ಖರ್ಚು, ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಿದ್ಧರಾಮಯನವರು ನಡೆದು ಬಂದ ದಾರಿ, ಸಾಮಾಜಿಕ ನ್ಯಾಯ ಹೋರಾಟ ಕುರಿತಂತೆ ಅವರ ಕೊಡುಗೆ ಮತ್ತು ಮುಂದಿನ ದಿನಗಳಲ್ಲಿ ಕೋಮು ಶಕ್ತಿಗಳನ್ನು ಹಣಿಯಲು ತಂತ್ರ ರೂಪಿಸುವ ಕುರಿತಂತೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಸೇರಿ ಚರ್ಚಿಸುವರು. ಹೀಗಾಗಿ, ಸದರಿ ಕಾರ್ಯಕ್ರಮವು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ರಾಜಕೀಯ ದಿಕ್ಸೂಚಿಯಾಗಲಿದೆ ಎಂದರು. ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತ್ತು ಎಲ್ಲ ಜಾತಿಗಳ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು  

ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ​‍್ಪ, ನಿವೃತ್ತ ಪೋಲಿಸ್ ಅಧಿಕಾರಿ ಅಶೋಕ ಸದಲಗಿ, ಬೆಂಗಳೂರು ಮಹಾನಗರ ಸಭೆಯ ಮಾಜಿ ಮಹಾಪೌರ ವೆಂಕಟೇಶ ಮೂರ್ತಿ, ಮಡ್ಡೆಪ್ಪ ತೋಳಿನವರ,  ಡಾ ರಾಜೇಂದ್ರ ಸಣಳಿಕ್ಕಿ, ಲಕ್ಷಣರಾವ ಚಿಂಗಳೆ, ಸಿದ್ಧಲಿಂಗ ದಳವಾಯಿ, ಬೆಳಗಾವಿ ಮಾಜಿ ಮಹಾಪೌರ ಯಲ್ಲಪ್ಪ ಕುರುಬರ, ಉದ್ಯಮಿ ಸಿದ್ದಪ್ಪ ಪೂಜೇರಿ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ