ರಷ್ಯಾ ಉಕ್ರೇನ್ ಯುದ್ಧ: 11 ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವು
ಹೊಸದಿಲ್ಲಿ: ಮಾರ್ಚ್ 06: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 11ನೇ ದಿನವಾದ ಇಂದೂ ಸಹ ಮುಂದುವರಿದಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಈ ಯುದ್ಧದಲ್ಲಿ ರಷ್ಯಾ ಕೂಡ ಸಾಕಷ್ಟು ನಷ್ಟ ಅನುಭವಿಸಿದೆ. ಉಕ್ರೇನಿಯನ್ ಸೇನೆಯು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಇದುವರೆಗೆ 11 ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಯುದ್ಧದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಅಲ್ಲದೆ ರಷ್ಯಾಕ್ಕೆ ಸೇರಿದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ. ಅದರಲ್ಲಿ 48 ಹೆಲಿಕಾಪ್ಟರ್‌ಗಳು, 285 ಟ್ಯಾಂಕ್‌ಗಳು, 44 ಮಿಲಿಟರಿ ವಿಮಾನಗಳು, 60 ಇಂಧನ ಟ್ಯಾಂಕ್‌ಗಳು, 2 ದೋಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಸೇರಿವೆ ಎಂದು ಉಕ್ರೇನ್ ಸೇನೆ ಹೇಳಿದೆ.
ಮತ್ತೊಂದೆಡೆ ಕಳೆದೊಂದು ದಿನದಲ್ಲಿ ಉಕ್ರೇನ್‌ನ ಝೈಟೊಮಿರ್ ಪ್ರದೇಶದಲ್ಲಿ 4 ಎಸ್‌ಯು-27 ಮತ್ತು ಒಂದು ಮಿಗ್-29 ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಇನ್ನು ರಾಡೋಮಿಶಾಲ್ ಪ್ರದೇಶದಲ್ಲಿ ಎಸ್‌ಯು-27, ಎಸ್‌ಯು-25 ಹಾಗೂ ನಿಜಿನ್ ಪ್ರದೇಶದಲ್ಲಿ ಒಂದು ಎಸ್‌ಯು-25 ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ಮಾಹಿತಿ ನೀಡಿದೆ.
ಈ ಮಧ್ಯೆ, ಉಕ್ರೇನ್‌ನಿಂದ ಇದುವರೆಗೆ 15 ಲಕ್ಷ ಜನರು ದೇಶವನ್ನು ತೊರೆದು ನೆರೆಯ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹೆಚ್ಚಿನ ಜನರು ಪೋಲೆಂಡ್ ಮತ್ತು ರೊಮೇನಿಯಾದಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರು ಮೊಲ್ಡೊವಾ ಮತ್ತು ಸ್ಲೋವಾಕಿಯಾಕ್ಕೆ ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ರಷ್ಯಾದ ದಾಳಿಯಿಂದ ಉಕ್ರೇನ್‌ನಲ್ಲಿ 351 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ದೃಢಪಡಿಸಿದೆ. ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದಾಗಿನಿಂದ 707 ನಾಗರಿಕರು ಗಾಯಗೊಂಡಿದ್ದಾರೆ ಎಂದು ಜಿನೀವಾ ಮೂಲದ ಕಚೇರಿ ತಿಳಿಸಿದೆ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ 86 ಜನ ಸಾವಿಗೀಡಾಗಿದ್ದು, 385 ಮಂದಿ ಗಾಯಗೊಂಡಿದ್ದಾರೆ ಎಂದು ಯುಎನ್ಎಚ್‌ಸಿಆರ್ಹೇ ಹೇಳಿದೆ. ಕೈವ್ ಹೊರತುಪಡಿಸಿ, ಚೆರ್ಕಾಸಿ, ಚೆರ್ನಿಹಿವ್, ಖಾರ್ಕಿವ್, ಖೆರ್ಸನ್, ಒಡೆಸ್ಸಾ, ಸುಮಿ, ಝಪೊರೊಝೈ ಮತ್ತು ಝೈಟೊಮಿರ್ ಪ್ರದೇಶಗಳಲ್ಲಿ 265 ನಾಗರಿಕರು ಮೃತಪಟ್ಟಿದ್ದು, 322 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.