ಕೋವಿಡ್ ವೈರಸ್ ಮೂಲದ ಮರು ತನಿಖೆ; ಡಬ್ಲ್ಯುಎಚ್‌ಓ ಪ್ರಸ್ತಾಪ ತಿರಸ್ಕರಿಸಿದ ಚೀನಾ
ಬೀಜಿಂಗ್, ಆಗಸ್ಟ್ 13 ಕೋವಿಡ್ -19 ಸಾಂಕ್ರಾಮಿಕ ಮೂಲದ ಬಗ್ಗೆ ಮರು ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಪ್ರಸ್ತಾವನೆಯನ್ನು ಚೀನಾ ಶುಕ್ರವಾರ ತಿರಸ್ಕರಿಸಿದೆ. ಈ ರೋಗ ಹೇಗೆ ಪ್ರಾರಂಭಗೊಂಡಿತು ಎಂಬುದನ್ನು ತಿಳಿದುಕೊಳ್ಳಲು ರಾಜಕೀಯ ಪ್ರಯತ್ನಗಳ ಬದಲಿಗೆ ವೈಜ್ಞಾನಿಕ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಅದು ಹೇಳಿದೆ.
ಚೀನಾದ ಉಪ ವಿದೇಶಾಂಗ ಸಚಿವ ಮಾ ಝಓಕ್ಸ್ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸಾಂಕ್ರಾಮಿಕ ಮೂಲ ತಿಳಿದುಕೊಳ್ಳಲು ರಾಜಕೀಯವಾಗಿ ನಡೆಯುವ ಯಾವುದೇ ಪ್ರಯತ್ನವನ್ನು ತನ್ನ ದೇಶ ವಿರೋಧಿಸುವುದಾಗಿ ಹೇಳಿದ್ದಾರೆ . ವೈರಾಣುವಿನ ಮೂಲ ಗುರುತಿಸುವ ತನಿಖೆಗೆ ಸಹಾಯ ನೀಡಲು ಚೀನಾ ಸದಾ ಸಿದ್ಧವಾಗಿದೆ. ಈ ವಿಷಯದಲ್ಲಿ ಎಂದೂ ಸಹ ನಿರಾಕರಿಸಿರಲಿಲ್ಲ. ಆದರೆ, ತನಿಖೆಗೆ ರಾಜಕೀಯ ಬಣ್ಣ ಬಳಿಯುವುದನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿ ವರದಿಯಲ್ಲಿ ಹೇಳಿರುವಂತೆ ಸಾಂಕ್ರಾಮಿಕದ ಮೂಲಗಳ ಬಗ್ಗೆ ಫಾಲೋ - ಅಪ್, ಹೆಚ್ಚುವರಿ ಸಂಶೋಧನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಶಂಶೋಧನೆಯನ್ನು ವಿಜ್ಞಾನಿಗಳು ಮಾತ್ರ ನಡೆಸಬೇಕು. ಕೇವಲ ಜೆನೋಟಿಕ್ ಆರಿಜನ್ಸ್ , ಸೋಂಕು ಪ್ರಸರಣ ಮಾರ್ಗಗಳ ಕುರಿತು ಮಾತ್ರ ಸಂಶೋಧನೆ ನಡೆಯಬೇಕು ಎಂದು ಹೇಳಿದ್ದಾರೆ.
WHO ಕಳೆದ ತಿಂಗಳು ಮಂಡಿಸಿದ ಪ್ರಸ್ತಾವನೆಯಲ್ಲಿ, ಕೊರೊನಾ ವೈರಸ್ ಮೂಲವನ್ನು ಗುರುತಿಸಲು ಎರಡನೇ ಹಂತದ ಅಧ್ಯಯನಗಳು ಚೀನಾದಲ್ಲಿ ನಡೆಯಬೇಕು ಎಂದು ಹೇಳಿತ್ತು. ಚೀನಾದ ವುಹಾನ್, ಬೀಜಿಂಗ್ ನಲ್ಲಿರುವ ಪ್ರಯೋಗಾಲಯಗಳು, ಮಾರುಕಟ್ಟೆಗಳ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಹೇಳಿತ್ತು. ಡಬ್ಲ್ಯುಎಚ್‌ಒ ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಎಲ್ಲ ಸರ್ಕಾರಗಳು ರಾಜಕೀಯ ರಹಿತವಾಗಿ ನೋಡಬೇಕು ಎಂದು ಕರೆ ನೀಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮೂಲಗಳನ್ನು ತ್ವರಿತವಾಗಿ ಗುರುತಿಸಲು ಎಲ್ಲಾ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಅದು ಕರೆ ನೀಡಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳು ಸೃಷ್ಟಿಸಬಹುದಾದ ರೋಗಕಾರಕಗಳ ಬಗ್ಗೆ ಜಂಟಿ ಕ್ರಮ ರೂಪಿಸಲು ಒಟ್ಟಾಗಿ ಬರುವಂತೆ ಕೋರಿದೆ.
ಕೋವಿಡ್ -19 ವೈರಾಣು 2019 ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡಿತು. ನಂತರ ಪ್ರಪಂಚದ ಎಲ್ಲ ಭಾಗಗಳಿಗೆ ವ್ಯಾಪಿಸಿತ್ತು. ಈ ಶತಮಾನದ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವಾಗಿ ಇಡೀ ಜಗತ್ತನ್ನು ಕಾಡುತ್ತಿದೆ. ಇಲ್ಲಿಯವರೆಗೆ, ಸಾಂಕ್ರಾಮಿಕದಿಂದ ಸುಮಾರು 43 ದಶಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿದೆ.