ಮೂಡಲಗಿ ತಾಲೂಕಿಗೆ ಶೀಘ್ರ ಸೌಲಭ್ಯಗಳನ್ನು ಕಲ್ಪಿಸಿ : ತಾಲೂಕಾ ಹೋರಾಟ ಸಮಿತಿ ಸದಸ್ಯರ ಒತ್ತಾಯ: ಮೇ 20ರತನಕ ಸ್ಪಂದಿಸದಿದ್ದರೆ ಸತ್ಯಾಗ್ರಹದ ಎಚ್ಚರಿಕೆ
ಲೋಕದರ್ಶನ ವರದಿ
ಗುರ್ಲಾಪೂರ (26): ಪಕ್ಷಾತೀತವಾಗಿ ಹೋರಾಟ ಮಾಡಿ ಮೂಡಲಗಿಯನ್ನು ತಾಲೂಕು ಮಾಡಿಕೊಂಡರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಮುಖ್ಯವಾದ ಉಪ ನೋಂದಣಿ ಕಚೇರಿಯ ಬಗ್ಗೆ ಶಾಸಕರು ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ ಏ. 1ರಂದು ಕಚೇರಿ ಪ್ರಾರಂಭವಾಗುವುದಾಗಿ ಹೇಳಿ ಎಪ್ರೀಲ ಫೂಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ ಉಟಗಿ ಹೇಳಿದರು.
ಭಾನುವಾರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಮೂಡಲಗಿ ತಾಲೂಕಾ ಹೋರಾಟ ಸಮಿತಿ ಸದಸ್ಯರಿಂದ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಲಗಿ ತಾಲೂಕಿಗೆ ಬರಬೇಕಾದ ಕಚೇರಿಗಳು ತ್ವರಿತವಾಗಿ ಆಗಬೇಕು ಮತ್ತು ಅಲ್ಲಿ ಪ್ರತ್ಯೇಕ ಅಧಿಕಾರಿಗಳ ನೇಮಕವಾಗಬೇಕಾಗಿದೆ. ರಾಜ್ಯ ಸರ್ಕಾರವು ಮೇ 20ರ ಒಳಗೆ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸಿ ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೇ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಮೂಡಲಗಿ ತಾಲೂಕಾ ಅಭಿವೃದ್ಧಿ ಸಮಿತಿಯಿಂದ ಸತ್ಯಾಗ್ರಹವನ್ನು ಮಾಡಲಾಗುವುದು. 2018ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೂಡಲಗಿ ತಾಲೂಕಾ ಕೇಂದ್ರವೇನೋ ಆಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಕೋರ್ಟ್, ತಹಶೀಲ್ದಾರ, ತಾಪಂ ಇಓ, ಸಿಟಿಪಿಓ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹೊರತು ಪಡಿಸಿದರೆ ಇತರೆ ಯಾವುದೇ ಇಲಾಖೆಯ ತಾಲೂಕು ಕಚೇರಿಗಳು ಇನ್ನೂವರೆಗೆ ಆಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ರಚನೆಯಾಗಿ ಸುಮಾರು 4 ವರ್ಷಗಳು ಕಳೆದರೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ನೀರೀಕ್ಷಕರ ಕಚೇರಿ, ಜಿಪಂ ಉಪವಿಭಾಗ, ಉಪನೋಂದಣಿ ಕಚೇರಿ, ಅಗ್ನಿಶಾಮಕ ಠಾಣೆ ಸೇರಿದಂತೆ ಅನೇಕ ಕಚೇರಿಗಳು ನಿರ್ಮಾಣಗೊಂಡಿಲ್ಲ. ಇದರಿಂದ ಗ್ರಾಮಗಳ ಜನರು ಸಣ್ಣ ಪುಟ್ಟ ದಾಖಲೆಗಳಿಂದ ಹಿಡಿದು ಎಲ್ಲ ಕೆಲಸಗಳಿಗೂ ಜನರು ಈಗಲೂ ಗೋಕಾಕಗೆ ಅಲೆದಾಡಬೇಕಾಗಿದೆ ಎಂದರು.
ಮುಖಂಡ ಲಕ್ಕಣ್ಣ ಸವಸುದ್ದಿ ಮಾತನಾಡಿ, ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಗತಿಸಿದರೂ ಅಂದುಕೊಂಡಷ್ಟು ಸುಧಾರಣೆಯಾಗಿಲ್ಲ ಈ ತಾಲೂಕಿನಲ್ಲಿ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರೈತರಿಗೆ ಬೇಕಾಗುವ ಕೃಷಿ ಇಲಾಖೆ, ಉಪನೋಂದಣಿ ಕಚೇರಿ ತ್ವರಿತವಾಗಿ ಆಗಬೇಕು. ನೂತನ ತಾಲೂಕು ರಚನೆಯಾದ ತಾಲೂಕುಗಳು ಈಗಾಗಲೇ ಅಭಿವೃದ್ದಿಯಾಗಿದ್ದು, ತಾಲೂಕು ಕೇಂದ್ರವಾಗಿರುವ ಮೂಡಲಗಿ ಪಟ್ಟಣ ಅಭಿವೃದ್ಧಿಯಾಗದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ತಾಲೂಕಿನಲ್ಲಿ ಅಭಿವೃದ್ದಿ ಕಾರ್ಯಗಳು ಮಾಧ್ಯಮಗಳಲ್ಲಿ ಮಾತ್ರ ಅಭಿವೃದ್ಧಿ ಕಂಡಿದೆ ಹೊರೆತು ನೈಜವಾಗಿ ಅಭಿವೃದ್ಧಿಯಾಗಿಲ್ಲ ಎಂದು ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಮುಖಂಡರಾದ ಭೀಮಪ್ಪ ಹಂದಿಗುಂದ ಹಾಗೂ ಎಮ್ ಎಸ್ ಪಾಟೀಲ ಮಾತನಾಡಿ, ಮೂಡಲಗಿ ತಾಲೂಕಿಗೆ ಬರಬೇಕಾದ ಇಲಾಖೆಗಳು ಬರದೇ ಇರುವುದರಿಂದ ಮೂಡಲಗಿ ತಾಲೂಕಿನ ಜನರಿಗೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಮ್ಮದೇ ಸರ್ಕಾರ ಇರುವುದರಿಂದ ಸರ್ಕಾರದ ಗಮನ ಸೆಳೆದು ತ್ವತರಿತವಾಗಿ ಮೂಡಲಗಿ ತಾಲೂಕಿಗೆ ಬರಬೇಕಾದ ಇಲಾಖೆಗಳನ್ನು ಮೇ.20ರ ಒಳಗೆ ಪ್ರಾರಂಭಿಸಿ ತಾಲೂಕಿನ ಜನತೆಗೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುರುನಾಥ ಗಂಗನ್ನವರ, ಲಿಂಗರಾಜ ಅಂಗಡಿ, ದುಂಡಪ್ಪ ಜಾಡರ, ಅವ್ವಪ್ಪ ತುಪಳೆ ಹಾಗೂ ಅನೇಕರು ಉಪಸ್ಥಿತರಿದ್ದರು.