ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷ ಮಾಧ್ಯಮದ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷ  ಮಾಧ್ಯಮದ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ Protest against the government's unscientific and anti-people policy of bilingual medium in governme

ಲೋಕದರ್ಶನ ವರದಿ 

ಧಾರವಾಡ 23 : ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷ ಮಾಧ್ಯಮದ ಹೆಸರಿನಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲಿಷ್ ಮಾಧ್ಯಮವನ್ನು ಕಡ್ಡಾಯ ಮಾಡುತ್ತಿರುವ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿನಯ ಚಂದ್ರ ಎಸ್ ವಿ ಮಾತನಾಡಿ, “ರಾಜ್ಯದ 4404 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ.

ಸರ್ಕಾರವು ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲಿಷಿನಲ್ಲೇ ಪಾಠ ಮಾಡಬೇಕೆಂದು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ. ಕೆಲವು ಶಾಲೆಗಳಲ್ಲಿ ಜೂನ್ ನಿಂದ ಕನ್ನಡ ಮಾಧ್ಯಮ ಇರುವುದಿಲ್ಲ, ಬದಲಿಗೆ ಕೇವಲ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಇದು ಅಕ್ಷಮ್ಯ! ಸರ್ಕಾರದ ಈ ನಡೆಯನ್ನು ಎಐಡಿಎಸ್‌ಒ ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ.  

ಮಗುವಿನ ಸಮರ​‍್ಕ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಕನಿಷ್ಠ 5ನೇ ತರಗತಿವರೆಗೂ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಸಂವಹನದ ಭಾಷೆಯೇ ಕಲಿಕೆಯ ಭಾಷೆಯಾದಾಗ ಮಗುವು ತನ್ನ ಭಾವನೆಯನ್ನು ಸಮರ​‍್ಕವಾಗಿ ವ್ಯಕ್ತಪಡಿಸಲು ಮತ್ತು ವಿಷಯಗಳನ್ನು ಗ್ರಹಿಸಲು ಸಹಾಯಕವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಈ ಅಭಿಪ್ರಾಯವನ್ನು ಸರ್ಕಾರ ಗಾಳಿಗೆ ತೂರಿದೆ. ಕೂಡಲೇ ಈ ಅವೈಜ್ಞಾನಿಕ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. 

ಮುಂದುವರೆದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷರಾದ ಮಲ್ಲೇಶ್ ಕಟಗಿ ಮಾತನಾಡಿ, “ಸರ್ಕಾರಿ ಶಾಲೆಗಳು ಉಳಿಯಬೇಕೆಂದು ಈಗಾಗಲೇ ರಾಜ್ಯದಾದ್ಯಂತ ಹೋರಾಟವನ್ನು ನಡೆಸುತ್ತಿದ್ದೇವೆ. ಕನ್ನಡ ಶಾಲೆಗಳನ್ನು  ಮುಚ್ಚುವುದರ ಜೊತೆಗೆ ಕನ್ನಡ ಮಾಧ್ಯಮವನ್ನೇ ಕಿತ್ತುಹಾಕಲು ಹೊರಟಿರುವ ರಾಜ್ಯ ಸರ್ಕಾರ ಈ ಅಪ್ರಜಾತಾಂತ್ರಿಕ  ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಹಾಗೂ ಮಾತೃಭಾಷೆಗೆ ಅಪಚಾರ ಮಾಡಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.” 

ಪ್ರತಿಭಟನೆಯಲ್ಲಿ ಎಐಡಿಎಸ್‌ಒ  ಜಿಲ್ಲಾಧ್ಯಕ್ಷರಾದ ಸಿಂಧು ಕೌದಿ,ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷರಾದ ಮಲ್ಲೇಶ್ ಕಟಗಿ, ಸಮಿತಿಯ ಉಪಾಧ್ಯಕ್ಷರಾದ ಶರಣಬಸವ ಗೋನವಾರ, ಭುವನ ಬಳ್ಳಾರಿ, ಗಂಗಾ ಕೋಕರೆ ಹಾಗೂ ಎಐಡಿಎಸ್‌ಒ ಜಿಲ್ಲಾ  ಕಾರ್ಯಕರ್ತರಾದ ಸಿದ್ದು ಚಿಪ್ಪಲಕಟ್ಟಿ ಹಾಗೂ ಶಾಂತೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.