ಎರಡನೇ ಎಲಿಜಬತ್ ರಾಣಿ ಪತಿ ರಾಜಕುಮಾರ ಫಿಲಿಪ್ ವಿಧಿವಶ
ಲಂಡನ್, ಏ 9: ಬ್ರಿಟಿಷ್ ರಾಜಮನೆತನದಲ್ಲಿ ಸುದೀರ್ಘ ಇತಿಹಾಸ ಹೊಂದಿದ್ದ ರಾಜಕುಮಾರ ಫಿಲಿಪ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ವಿಂಡ್ಸರ್ ಕ್ಯಾಸಲ್ ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಅವರು ಕಿಂಗ್ ಎಡ್ವರ್ಡ್ -7 ಆಸ್ಪತ್ರೆ, ಸೇಂಟ್ ಬರಾಟೊಲೋಮೆವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ವಿವರಗಳನ್ನು ಬಕಿಂಗ್ ಹ್ಯಾಮ್ ಅರಮನೆ ಪ್ರಕಟಿಸಿದೆ.
ಡ್ಯೂಕ್ ಆಫ್ ಎಡಿನ್ ಬರ್ಗ್ ರಾಜಕುಮಾರ ಫಿಲಿಪ್ (99) ಅವರ ಮರಣ ಸುದ್ದಿಯನ್ನು ರಾಜಮನೆತನದ ಎಲ್ಲ ಸದಸ್ಯರಿಗೆ ತಿಳಿಸಲಾಗಿದೆ ಎಂದು ಬಕಿಂಗ್ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ವ್ಯವಸ್ಥೆ ಸಧ್ಯದಲ್ಲಿಯೇ ನೆರವೇರಸಲಾಗುವುದು ಎಂದು ತಿಳಿಸಿದೆ. ಈ ಹಿಂದೆ ತಮ್ಮ ಅಂತ್ಯಕ್ರಿಯೆಯ ಬಗ್ಗೆ ಪ್ರಸ್ತಾಪಿಸಿದ್ದ ಫಿಲಿಪ್, ಅಂತ್ಯಕ್ರಿಯೆಗೆ ದೊಡ್ಡ ವ್ಯವಸ್ಥೆ, ವಿಶೇಷತೆ ಬೇಡ ಎಂದು ಹೇಳಿದ್ದರು. ತಮ್ಮ ಅಂತ್ಯಕ್ರಿಯೆ ವೆಸ್ಟ್ಮಿನಿಸ್ಟರ್ ಹಾಲ್ ನಲ್ಲಿ ನಡೆಸುವುದನ್ನು ಅವರು ಬಯಸಿರಲಿಲಿಲ್ಲ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ಅವರ ಅಂತ್ಯಕ್ರಿಯೆ ವಿಂಡ್ಸರ್ ಕ್ಯಾಸಲ್‌ನ ಫ್ರಾಗ್‌ಮೋರ್ ಗಾರ್ಡನ್‌ನಲ್ಲಿ ನಡೆಯಲಿದೆ. ರಾಣಿ ಎಲಿಜಬೆತ್ ಈ ತೋಟದಲ್ಲಿ ನಾಯಿಗಳೊಂದಿಗೆ ನಡೆಯುವ ಅಚ್ಚುಮೆಚ್ಚಿನ ತಾಣವಾಗಿದೆ. ರಾಜಕುಮಾರನ ನಿಧನಕ್ಕೆ ಸಂತಾಪ ಸೂಚಿಸಲು ದೇಶಾದ್ಯಂತ ರಾಷ್ಟ್ರೀಯ ಧ್ವಜಗಳನ್ನು ಕೆಳಕ್ಕೆ ಇಳಿಸಲಾಗಿದೆ.
ರಾಜಕುಮಾರ ಫಿಲಿಪ್ , ರಾಣಿ ಎಲಿಜಬೆತ್ II ರನ್ನು 1947 ರಲ್ಲಿ ವಿವಾಹವಾಗಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದಾರೆ - ಚಾರ್ಲ್ಸ್, ಆನ್ನೆ, ಆಂಡ್ರ್ಯೂ ಹಾಗೂ ಎಡ್ವರ್ಡ್. ಪ್ರಿನ್ಸ್ ಫಿಲಿಪ್ ಮತ್ತು ರಾಣಿ ಎಲಿಜಬೆತ್ II ತಮ್ಮ 73 ನೇ ವಿವಾಹ ವಾರ್ಷಿಕೋತ್ಸವ ಕಳೆದ ವರ್ಷ ನವೆಂಬರ್ ನಲ್ಲಿ ನಡೆದಿತ್ತು. ಕೋವಿಡ್ -19 ಸಾಂಕ್ರಾಮಿ ದಿಂದಾಗಿ ಇಬ್ಬರೂ ವಿಂಡ್ಸರ್ ಕ್ಯಾಸಲ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಈ ವರ್ಷ ದ ಜನವರಿಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು.
ಗ್ರೀಸ್ ಗೆ ಸೇರಿದ ರಾಜಕುಮಾರ ಫಿಲಿಪ್ ಎರಡನೇ ಮಹಾಯುದ್ಧದ ನಂತರ ಬ್ರಿಟಿಷ್ ರಾಜಪ್ರಭುತ್ವವನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಣಿ ಎಲಿಜಬೆತ್ ಗೆ ಅತ್ಯಂತ ನಿಷ್ಠರಾಗಿದ್ದರು. ಅವರು ತಮ್ಮ 100 ನೇ ಜನ್ಮ ದಿನಕ್ಕೆ ಇನ್ನೂ ಎರಡು ತಿಂಗಳ ಇರುವಾಗ ನಿಧನರಾಗಿದ್ದಾರೆ.