ಪಿಎಂಜೆಜೆಬಿವೈ ಯೋಜನೆ: ಕೆನರಾ ಬ್ಯಾಂಕನಿಂದ 2 ಲಕ್ಷ ರೂ ಪರಿಹಾರ ಧನ ವಿತರಣೆ
ಹುಕ್ಕೇರಿ 02: ಹುಕ್ಕೇರಿ ಕೆನರಾ ಬ್ಯಾಂಕ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷ ರೂ ಪರಿಹಾರ ಧನ ವಿತರಿಸಲಾಯಿತು.
ಹುಕ್ಕೇರಿ ಪಟ್ಟಣದ ಸಾವಳಗಿ ಗಲ್ಲಿಯ ನಿವಾಸಿ ಶ್ಯಾಮ ಅಣ್ಣಪ್ಪಾ ಸಾವಳಗಿ ಅವರು ಉಳಿತಾಯ ಖಾತೆಯಲ್ಲಿ ಪಿಎಂಜೆಜೆಬಿವೈ ಜೀವವಿಮೆ ಪಡೆದಿದ್ದರು. ಅವರ ಅಕಾಲಿಕ ಮರಣದ ತರುವಾಯ ಫಲಾನುಭವಿಗೆ ಜುಲೈ 1ರಂದು ಕೆನರಾ ಬ್ಯಾಂಕಿನ 120ನೇ ಸಂಸ್ಥಾಪನಾ ದಿನದಂದು ಪರಿಹಾರ ವಿತರಿಸಲಾಯಿತು.
2ಲಕ್ಷ ರೂ ಪರಿಹಾರ ವಿತರಿಸಿದ ಶಾಖೆಯ ಹಿರಿಯ ವ್ಯವಸ್ಥಾಪಕ ರಾಜಶೇಖರ ಪಿ ಮಾತನಾಡಿ ಗ್ರಾಹಕರು ಭಾರತ ಸರಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಭದ್ರತೆಯನ್ನು ಸುರಕ್ಷಿತ ಮಾಡಿಕೊಳ್ಳುವಂತೆ ಕರೆ ನೀಡಿದರು. ಬ್ಯಾಂಕಿನ ನಿಯಮಾನುಸಾರ ಗ್ರಾಹಕರು ಸಹಕರಿಸಿದರೆ ಬ್ಯಾಂಕ ಮತ್ತು ಗ್ರಾಹಕರ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಎಂದ ಅವರು ಉಳಿತಾಯ ಹಾಗೂ ಸಾಲ ಸೌಲಭ್ಯಗಳು ಸೇರಿದಂತೆ ಬ್ಯಾಂಕಿನಿಂದ ದೊರೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.