ಡೊನಾಲ್ಡ್ ಟ್ರಂಪ್ ಖಾತೆ ಶಾಶ್ವತವಾಗಿ ಅಮಾನತುಗೊಳಿಸಿದ ಟ್ವಿಟರ್
ವಾಷಿಂಗ್ಟನ್, ಜನವರಿ 9 : ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ನಿರ್ಬಂಧಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಟ್ರಂಪ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಶಾಶ್ವತವಾಗಿ ಅಮಾನತು ಮಾಡಿದೆ. ವಾಷಿಂಗ್ಟನ್ ನಲ್ಲಿನ ಕ್ಯಾಪಿಟಲ್ ಹಿಲ್ಗೆ ನುಗ್ಗಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಎರಡು ದಿನಗಳ ಬಳಿಕ ಟ್ವಿಟ್ಟರ್ ಸಂಸ್ಥೆ ಈ ಕ್ರಮ ಕೈಗೊಂಡಿದೆ. ದೇಶದಲ್ಲಿ ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಪಾಯದ ಕಾರಣ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದೆ. ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಟ್ವೀಟ್ಗಳನ್ನು ಮತ್ತು ಅವುಗಳ ಸುತ್ತಲಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದ ಬಳಿಕ, ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯದ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟ್ಟರ್ ಸಂಸ್ಥೆ ಸ್ಪಷ್ಟಣೆ ನೀಡಿದೆ. ಗುರುವಾರ ಟ್ರಂಪ್ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯಗೊಂಡಿತ್ತು. ಇಲ್ಲಿ ನೀಡುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದು, ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಯಾವುದೇ ಪ್ರಮಾದ ನಡೆದರೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಂದೂ ಎಚ್ಚರಿಸಿತ್ತು.