ಶಿರಹಟ್ಟಿ

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳೋಣ : ರಮೇಶ ನಿರ್ವಾಣಿಶೆಟ್ಟರ

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳೋಣ : ರಮೇಶ ನಿರ್ವಾಣಿಶೆಟ್ಟರ

ಶಿರಹಟ್ಟಿ 23:  ಈ ಜಗತ್ತಿನ ಮೇಲೆ ಜೀವಿಸುವಂತಹ ಪ್ರತಿಯೊಂದು ಜೀವಿಗೂ ಕೂಡ ಆಮ್ಲಜನಕ ಅತ್ಯವಶ್ಯಕವಾಗಿದ್ದು, ಈ ಆಮ್ಲಜನಕವನ್ನು ಕೃತಕವಾಗಿ ಉತ್ತತ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಆಮ್ಲಜನಕ ಸಿಗಬೇಕಾದರೆ ನಾವೆಲ್ಲರೂ ಸೇರಿ ನಮ್ಮ ನಮ್ಮ ಮನೆಗಳ ಮುಂದೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಗಿಡ, ಮರಗಳನ್ನು ಬೆಳೆಸಲು ಮುಂದಾದಾಗ ಮಾತ್ರ ಹೇರಳವಾದ ಆಮ್ಲಜನಕ ಉತ್ಪಾದಿಸಲು ಮುಂದಾದಾಗ ಮಾತ್ರ ಎಲ್ಲರೂ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರ್ವಾಣಿಶೆಟ್ಟರ ಕರೆ ನೀಡಿದರು. 

ಅವರು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ತಾಲೂಕು ಪಂಚಾಯತ್ ಶಿರಹಟ್ಟಿ, ಗ್ರಾಮ ಪಂಚಾಯಿತಿ ಬೆಳ್ಳಟ್ಟಿ, ಕರ್ನಾಟಕ ಪಬ್ಲಿಕ್ ಹೆಣ್ಣು ಮಕ್ಕಳ ಶಾಲೆ ಬೆಳ್ಳಟ್ಟಿ, ತೋಟಗಾರಿಕಾ ಇಲಾಖೆ ಶಿರಹಟ್ಟಿ, ಸಾಮಾಜಿಕ ಅರಣ್ಯ ಇಲಾಖೆ ಶಿರಹಟ್ಟಿ ಇವರುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಜರುಗಿದ ತಾಯಿ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ತಾಯಿಯ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಈ ಮೂಲಕವಾದರೂ ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪೋಶಿಷಿ ಬೆಳೆಸುವುದರ ಮೂಲಕ ಪ್ರಕೃತಿಗೆ ನಾವೆಲ್ಲರೂ ನಮ್ಮಿಂದ ಒಂದು ಕೊಡುಗೆ ನೀಡಬೇಕೆಂದು ತಿಳಿಸಿದರು.  

ನಂತರ ಶಿರಹಟ್ಟಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಆರ್ ವಿ ದೊಡ್ಮನಿ ಮಾತನಾಡಿ, ಪರಿಸರವನ್ನು ನಾವು ಹಸಿರಾಗಿಸಿದರೆ ಅದು ನಮಗೆ ಉಸಿರನ್ನು ನೀಡುತ್ತದೆ. ಹಸಿರೇ ಉಸಿರಾಗಬೇಕೆಂದು ಸಲಹೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಮ್ಮನ ಹೆಸರಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡಬೇಕೆಂದು ತಾ. ಪಂ.ಸಹಾಯಕ ಲೆಕ್ಕಾಧಿಕಾರಿ ಶಿವಕುಮಾರ್ ಕೆ ವಾಲಿ ಹೇಳಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಮೋಹನ್ ಗುತ್ತೆಮ್ಮನವರ, ರಮೇಶ್ ಮಲ್ಲಾಡದ, ಸುರೇಶರೆಡ್ಡಿ ಬಸವರೆಡ್ಡಿ, ದ್ಯಾಮಣ್ಣ ಮಾಳಮ್ಮನವರ್, ಪಿಡಿಓ ಹನುಮಂತಪ್ಪ ತಳವಾರ್‌. ಕಾರ್ಯದರ್ಶಿ ಬಸವರಾಜ್, ಉಪವಲಯ ಅರಣ್ಯ ಅಧಿಕಾರಿ ಶಂಕ್ರ​‍್ಪ ಕೊಣಪ್ಪನವರ್, ಸಹಾಯಕ ತೋಟಗಾರಿಕಾ ನಿರ್ದೇಶಕ ರಮೇಶ್ ಹಾವರಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮಿ ಗಾಣಿಗೇರ, ಟಿಐಇಸಿ ಮಂಜುನಾಥ ಸ್ವಾಮಿ ಹೆಚ್ ಎಂ, ತಾಲೂಕು ನರೇಗಾ ಸಿಬ್ಬಂದಿ, ಜಿಕೆಎಂ ವಿಶಾಲಾಕ್ಷಿ, ಶಾಲಾ ಶಿಕ್ಷಕರು, ಎಸ್‌.ಡಿಎಂಸಿ ಸದಸ್ಯರು, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು,ಗ್ರಾ.ಪಂ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ