ಮುಂಡರಗಿ

ಬಲಿಷ್ಠವಾದ ದೇಶವನ್ನು ನಿರ್ಮಿಸಲು ಮುಂದಾಗೋಣ: ಗುರುರಾಜ ಕುಲಕರ್ಣಿ

ಬಲಿಷ್ಠವಾದ ದೇಶವನ್ನು ನಿರ್ಮಿಸಲು ಮುಂದಾಗೋಣ: ಗುರುರಾಜ ಕುಲಕರ್ಣಿ

ಮುಂಡರಗಿ 25:  ನಮ್ಮ ದೇಶದಲ್ಲೆಲ್ಲಾ ಸ್ವಾರ್ಥವು ಮನೆಮಾಡಿರುವುದಲ್ಲದೇ ಅಧಿಕಾರದ ಲಾಲಸೆ ಹಾಗೂ ಕ್ಷುಲ್ಲಕ ರಾಜಕಾರಣದಿಂದ ದೇಶದ ಆತ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದರಿಂದ ರಾಷ್ಟ್ರೀಯತೆಯ ಅಪಮೌಲ್ಯ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಸಂಘವನ್ನು ಸೇರಿಕೊಳ್ಳುವುದರೊಂದಿಗೆ ಬಲಿಷ್ಠವಾದ ದೇಶವನ್ನು ನಿರ್ಮಿಸಲು ಮುಂದಾಗೋಣ ಎಂದು ಧಾರವಾಡ ವಿಭಾಗದ ಆರ್‌.ಎಸ್‌.ಎಸ್ ವಕ್ತಾರರಾದ ಗುರುರಾಜ ಕುಲಕರ್ಣಿ ಹೇಳಿದರು. 

ಪಟ್ಟಣದ ಕ.ರಾ.ಬೆಲ್ಲದ ಮಹಾವಿದ್ಯಾಲಯದ ಮೈದಾನದಲ್ಲಿ ಶನಿವಾರ ಸಂಜೆ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶದೊಳಗೆ ಒಂದು ವಿಚಾರವನ್ನು ಇಟ್ಟುಕೊಂಡು ಸುದೀರ್ಘ ಅವಧಿಯವರೆಗೆ ಅದೇ ವಿಚಾರಕ್ಕಾಗಿ ಕೆಲಸ ಮಾಡುತ್ತಾ ತುಂಡಾಗದೇ, ಒಡೆದು ಹೋಗದೇ ಐದಾರು ಪಿಳಿಗೆಯವರೆಗೆ ಈ ಸಂಘ ನೂರರ ಸಮೀಪಕ್ಕೆ ಬಂದು ನಿಂತಿದೆ. ನಮ್ಮ ಇತಿಹಾಸವನ್ನು ಗಮನಿಸಿದಾಗ ಸಂಘದ ಹುಟ್ಟು, ಬೆಳವಣಿಗೆ ಮತ್ತು ಸಂಘದ ಸಾಧನೆ ಹಾದಿ ಎಲ್ಲರನ್ನು ಚಕಿತಗೊಳಿಸುವ ಸಂಗತಿ. 

ಆರ್‌.ಎಸ್‌.ಎಸ್ ಸಂಘವು ಹುಟ್ಟು ಆಗುವಾಗ ಪ್ರಚಾರವಿರಲಿಲ್ಲ. ಪ್ರಸಿದ್ಧಿಯ ಆಕಾಂಕ್ಷಿ ಇರಲಿಲ್ಲ. ಆದರೆ ವ್ಯಕ್ತಿಗಳಿಗೆ ಮಹತ್ವ ಇತ್ತು. ಏಕೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ವ್ಯಕ್ತಿಗಳ ಸಂಘಟನೆಯಾಗಿತ್ತು. ಈ ಸಂಘವನ್ನು ಪ್ರಾರಂಭ ಮಾಡಿದ ಡಾ.ಹೆಗಡೆವಾರ ಚಿಂತನೆ ಅಚಲವಾಗಿತ್ತು. ಸಣ್ಣ ಗುರಿ, ಆಕಾಂಕ್ಷೆಯನ್ನು ಇಟ್ಟುಕೊಂಡು ಸಂಘಟನೆ ಮಾಡಿದರು. ಈಡೀ ದೇಶದ ಇತಿಹಾಸವನ್ನು ಅಧ್ಯಯನ ಮಾಡಿದರು. ಅಧ್ಯಯನದ ಫಲವಾಗಿ ಅವರು ಅನೇಕ ಸಕ್ರಿಯೆಗಳನ್ನು ಕಂಡುಕೊಂಡರು.  

ಮೊದಲು ನಮಗೆ ನಾವ್ಯಾರು ಎನ್ನುವುದರ ಬಗ್ಗೆ ಅರಿವಿಲ್ಲ. ಇಂತಹ ಎಚ್ಚರಗೇಡಿ ಹಿಂದೂ ಸಮಾಜ ಈ ಹಿಂದು ಸಮಾಜ ಎಂದು ಗುರುತು ಮಾಡಿತು. ಮೈ ಮರೆಯುವ ಕಾಯಿಲೆ ಈ ಹಿಂದೂ ಸಮಾಜವನ್ನು ಆವರಿಸಿದೆ ಎನ್ನುವುದನ್ನು ಮನಗಂಡರು. ಈ ಜನಕ್ಕೆ ಅಂದಿನಿಂದಲೂ ಅನುಶಾಸನವಿಲ್ಲ. ಸ್ವತಂತ್ರ ಗಳಿಸಿ 76 ವರ್ಷ ಕಳೆದರೂ ಇಷ್ಟು ದೊಡ್ಡ ಸ್ವತಂತ್ರಕ್ಕೆ ನಾವು ತೆತ್ತ ಬೆಲೆ ಅಗಾದವಾದದ್ದು. ಸ್ವತಂತ್ರ್ಯ ಸುಮ್ಮನೆ ಬಂದಿಲ್ಲ. ಅನೇಕ ಹೋರಾಟಗಾರರ ಬಲಿದಾನದಿಂದ ಸ್ವತಂತ್ರ ಬಂತು.  

ಆದರೆ ಸ್ವತಂತ್ರಕ್ಕಾಗಿ ತೆತ್ತ ಬೆಲೆೆಯ ಅರಿವಿಲ್ಲ. ಹೀಗಾಗಿ ಅನುಶಾಸನ ಇಲ್ಲದೇ ಸ್ವತಂತ್ರ ಸಂಗ್ರಾಮದಲ್ಲಿ ದೊಡ್ಡದಾದ ಆಘಾತ ಎದುರಿಸಿದ್ದು ನಮ್ಮ ಅನುಶಾಸನ ಹೀನತೆಯಿಂದ. ಅಂದು 1857 ರಲ್ಲಿಯೇ ಸ್ವತಂತ್ರಗೊಳ್ಳುತ್ತಿದ್ದೇವು. ಅನುಶಾಸನ ಹೀನತೆಯ ಕೊರತೆಯಿಂದ ಸ್ವತಂತ್ರವನ್ನು 100 ವರ್ಷ ಮುಂದಕ್ಕೆ ದೂಡಿದ್ದೇವೆ. ಹೀಗಾಗಿ ಎಲ್ಲರಲ್ಲೂ ಈ ಸಂಘವನ್ನು ಸೇರಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಈ ನೈಜವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಬರಬೇಕು. ಹಿಂದೂ ಸಮಾಜವು ತನ್ನ ದೋಷವನ್ನು ನೀಗಿಸಿ ಉತ್ತಮ ಸಮಾಜವನ್ನು ನಿರ್ಮಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಬೇಕು ಅಂದಾಗ ಸದೃಡವಾದ ದೇಶವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು. 

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವಂತಪ್ಪ ಬಡಿಗೇರ ಮಾತನಾಡಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಕಡೆ ಗಮನಹರಿಸಬೇಕು. ಸಂಸ್ಕಾರ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸಂಘದಲ್ಲಿ ಶಿಸ್ತು ಹಿಂದೂ ಧರ್ಮದ ಸಂಸ್ಕಾರ, ಹೀಗಾಗಿ ಎಲ್ಲರಲ್ಲೂ ಶಿಸ್ತನ್ನು ಕಾಪಾಡಿಕೊಳ್ಳುವುದನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು. 

ಇದಕ್ಕೂ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚನ ಜರುಗಿತು. ರಸ್ಥೆ ಮಧ್ಯದಲ್ಲಿ ಗಣವೇಷದಾಗಿಗಳಿಗೆ ಹೂವುಗಳಿಂದ ಸಾರ್ವಜನಿಕರು ಸ್ವಾಗತಿಸಿದರು. ಈ ವೇಳೆ ಸುಮಾರು 240 ಗಣವೇಷದಾರಿಗಳು ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಆರ್‌.ಎಸ್‌.ಎಸ್ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ ಹಾಗೂ ತಾಲೂಕು ಕಾರ್ಯವಾಹ ಶ್ರೀನಿವಾಸ ಕಟ್ಟಿಮನಿ, ನಾರಾಯನ ಮಹೇಂದ್ರಕರ, ಮಾರುತಿ ಯಾವಗಲ, ಪ್ರವೀಣ ಅರ್ಕಸಾಲಿ, ಚಂದ್ರು ಹಿರೇಮಠ, ದೇವಪ್ಪ ಇಟಗಿ, ಮಹೇಶ ನಾಗರಹಳ್ಳಿ ಇತರರು ಇದ್ದರು. 


ಸುದ್ದಿ ಓದಿ