ಅಪನಂಬಿಕೆ ನಡುವೆಯೂ ಲಸಿಕೆ ಹಾಕಿಸಿಕೊಂಡ ಬೋರಿಸ್ ಜಾನ್ಸನ್
ಲಂಡನ್, ಮಾರ್ಚ್ 20 :ಜನರ ಅಪನಂಬಿಕೆಯ ನಡುವೆಯೂ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಕರೋನ ಸೋಂಕಿನ ಚಿಕಿತ್ಸೆ ಪಡೆದಿದ್ದ ಪ್ರಧಾನಿ , ಈ ವಾರದ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದರು ದೇಶದಲ್ಲಿ ಪ್ರಸ್ತುತ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಇದರಲ್ಲಿ 56 ವರ್ಷದ ಪ್ರಧಾನಿ ಜಾನ್ಸನ್ ಸೇರಿದ್ದಾರೆ. "ನಾನು ನನ್ನ ಮೊದಲ ಆಕ್ಸ್‌ಫರ್ಡ್- ಅಸ್ಟ್ರಾಜೆನೆಕಾ ಲಸಿಕೆ ಸ್ವೀಕರಿಸಿದ್ದೇನೆ. ಇದನ್ನು ಮಾಡಲು ಸಹಾಯ ಮಾಡಿದ ಎಲ್ಲ ಅದ್ಭುತ ವಿಜ್ಞಾನಿಗಳು, ಎನ್‌ಎಚ್‌ಎಸ್ ಸಿಬ್ಬಂದಿ ಮತ್ತು ಸ್ವಯಂಸೇವಕರಿಗೆ ನನ್ನ ಧನ್ಯವಾದಗಳು. ಲಸಿಕೆ ಪಡೆಯುವುದು ನಾವು ಸಹಜ ಜೀವನಕ್ಕೆ ಮರಳಲು ಮಾಡಬಹುದಾದ ಅತ್ಯುತ್ತಮ ಕೆಲಸ ಹೀಗಾಗಿ ಎಲ್ಲರೂ ಲಸಿಕೆ ಪಡೆದು ಆರೋಗ್ಯವಂತರಾಗಲಿ,ಎಂದಿನಂತೆ ಸಹಜ ಜೀವನ ನಡೆಸಲಿ ಎಂದೂ ಪ್ರಧಾನಿ ಜಾನ್ಸನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಲಸಿಕೆ ಶಾಟ್ ಸ್ವೀಕರಿಸುವ ಫೋಟೋವನ್ನೂ ಸಹ ಅವರು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.