ಸಂಸ್ಕಾರ ಮತ್ತು ಸಂಸ್ಕೃತಿ ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ-ಸಾಂಗಲಿ

ಸಂಸ್ಕಾರ ಮತ್ತು ಸಂಸ್ಕೃತಿ ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ-ಸಾಂಗಲಿ It is necessary to teach children about culture and tradition - Sangali

ಲೋಕದರ್ಶನ ವರದಿ 

ಗೋಕಾಕ 11 :   ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪಾಲಕರು ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಜಿ.ಎನ್‌.ಸಾಂಗಲಿ ಅಭಿಪ್ರಾಯಪಟ್ಟರು. ಅವರು ತಾಲೂಕಿನ ಶಿಂದಿಕುರಬೇಟ ಗ್ರಾಮದ ಡಾ.ಬಿ.ಆರ್‌.ಅಂಬೇಡ್ಕರ ಸಮತಾ ಶಿಕ್ಷಣ ಸಮಿತಿಯ ಮಾಧ್ಯಮಿಕ ಶಾಲೆಯ ಎಸ್‌ಎಸ್‌ಎಲ್‌ಸಿ ಸನ್ 1995/1996ಸಾಲಿನ ವಿದ್ಯಾರ್ಥಿಗಳ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪಾಲಕರು ತಮ್ಮ ಬದುಕಿನ ಜೊತೆಗೆ ಮಕ್ಕಳ ಬದುಕನ್ನು ರೂಪಿಸಿಕೊಳ್ಳಬೇಕು.

ಶಿಕ್ಷಣ. ಸಂಸ್ಥೆಯು ತಮಗೆ ಒಳ್ಳೆಯ ಮೌಲ್ಯ ಗಳನ್ನು ನೀಡಿದೆ. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಯಾವತ್ತೂ ಕೈ ಬೀಡುವುದಿಲ್ಲ. ನಾವು ಸದಾ ಸಾಧಕರಾಗಬೇಕು. ಇಂದಿನ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಹಾಗೂ ಟಿ.ವಿ ಗಳಿಂದ ದೂರ ಉಳಿಯಲು ಪಾಲಕರು ಮುಂದಾಗಬೇಕು ಎಂದರಲ್ಲದೇ ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇನೆ ಎನ್ನುವುದು ಮುಖ್ಯ ಎಂದು ಹೇಳಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಧಾನಗುರು ಎಸ್‌.ಎನ್‌. ಉರಜಿಂಗಗೋಳ ಅವರು ಕಳೆದ 30 ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಶಿಕ್ಷಣ ಕಲಿತು, ಇಂದು ವಿದ್ಯೆ ಹಾಗೂ ಜ್ಞಾನ ನೀಡಿದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಅವರನ್ನು ಅಭಿಮಾನ ಹಾಗೂ ಗೌರವದಿಂದ ಸನ್ಮಾನಿಸಿದ ಕ್ಷಣ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ  ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಹೇಳಿದರು.  

ವೇದಿಕೆ ಮೇಲೆ ಬಿ.ಎಂ.ಕಳಸನ್ನವರ,  ಕೆ.ವಿ.ಕಡ್ಡಿ, ಆರ್,ವೈ.ಬೆಳಗಲಿ, ಆರ್‌.ಎಸ್‌.ಸೊಗಲಿ, ಎಫ್‌.ಜಿ.ಕರನಾಚಿ, ಎಂ.ಎಸ್‌.ಪಾಟೀಲ,  ಸಿ.ಬಿ.ಡೂಗನವರ, ಎಂ.ಎಸ್‌.ಬೆಳಗಲಿ, ಪಿ.ಎಚ್‌.ಗೋಸಬಾಳ, ಆರ್‌.ಬಿ.ಕರೆಪ್ಪಗೋಳ, ವಿಠ್ಠಲ ಕರೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು. ವಿದ್ಯೆ ಕಲಿಸಿದ ಮಾಧ್ಯಮಿಕ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.  ಪ್ರಭಾಕರ ಕಾರ್ಯಾಗೋಳ ಸ್ವಾಗತಿಸಿದರು. ಪಂಚಾಕ್ಷರಿ ಪಂಚಯ್ಯನವರಮಠ ನಿರೂಪಿಸಿದರು. ಮಹಾಂತೇಶ ಪವಾರ್ ವಂದಿಸಿದರು.